ದಾಖಲಾತಿ ಸೇರಿಸಿದ ಪಹಣಿ ವಿತರಣೆ

12KMT1
Published on

ಕುಮಟಾ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಬಗ್ಗೋಣದ ಜನತಾ ಪ್ಲಾಟ್ ನಿವಾಸಿಗಳಿಗೆ ಉಪವಿಭಾಗಾಧಿಕಾರಿ ಆದೇಶದಂತೆ ಕಾಲಂ ನಂ. 9ರಲ್ಲಿ ಹೊಸದಾಗಿ ದಾಖಲಾತಿ ಸೇರಿಸಿದ ಪಹಣಿಗಳನ್ನು ಶಾಸಕ ದಿನಕರ ಶೆಟ್ಟಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕ್ಷೇತ್ರದ ಬಹಳಷ್ಟು ಜನತಾ ಪ್ಲಾಟ್ ನಿವಾಸಿಗಳಿಗೆ ತಮ್ಮ ಪಹಣಿ ಪತ್ರಿಕೆಯಲ್ಲಿ ಕಾಲಂ ನಂ. 11ರಲ್ಲಿ ಮಾತ್ರ ದಾಖಲಾತಿ ಇದೆ. ಕಾಲಂ ನಂ. 9ರಲ್ಲಿಯೂ ದಾಖಲಾಗದಿದ್ದರೆ ಸರ್ಕಾರದ ಸೌಲಭ್ಯ ಪಡೆಯಲು ಹಾಗೂ ಸಾಲ ಪಡೆಯುವುದಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ನಾನು ಶಾಸಕನಾಗಿದ್ದ ಹಿಂದಿನ ಅವಧಿಯಲ್ಲೂ ಬಹಳ ಕಡೆಗಳಲ್ಲಿ ಜನತಾ ಪ್ಲಾಟ್ ನಿವಾಸಿಗಳ ಈ ಸಮಸ್ಯೆಯನ್ನು ಬಗೆಹರಿಸುತ್ತಾ ಬಂದಿದ್ದೇನೆ. ಈಗ ಕರೊನಾ ಸಂಕಟ ಕಾಲದ ನಡುವೆಯೂ ತಾಲೂಕಾಡಳಿತ ಇತರ ಮಹತ್ವದ ಅಂಶಗಳ ಬಗ್ಗೆ ಚುರುಕಾಗಿ ಕೆಲಸ ಮಾಡುತ್ತಿದೆ. ಉಪವಿಭಾಗಾಧಿಕಾರಿಗಳ ಆದೇಶದಿಂದ ಜನತಾ ಪ್ಲಾಟ್ ನಿವಾಸಿಗಳ ಬಹುಕಾಲದ ಕನಸು ನನಸಾಗಿದೆ ಎಂದರು.

ಉಪವಿಭಾಗಾಧಿಕಾರಿ ಅಜಿತ್ ಎಂ.ರೈ ಮಾತನಾಡಿ, ಬಗ್ಗೋಣದ ಸರ್ವೆ ನಂ. 4ಅ 1ರಲ್ಲಿ 1978ಕ್ಕಿಂತ ಹಿಂದೆಯೇ ನಿವೇಶನ ರಹಿತರಿಗೆ ಜಾಗ ಮಂಜೂರಾಗಿ ವಾಸ್ತವ್ಯ ಹೊಂದಿದ್ದಾರೆ. ಫಲಾನುಭವಿಗಳಿಗೆ ಕಾಲಂ ನಂ. 11ರಲ್ಲಿ ದಾಖಲು ಮಾಡಿ ಜಾಗದ ಪಟ್ಟಾ ನೀಡಲಾಗಿತ್ತು. ಈಗ ಎಲ್ಲ ದಾಖಲಾತಿಗಳನ್ನೂ ಪರಿಶೀಲಿಸಿ ಪ್ಲಾಟ್ ಫಲಾನುಭವಿಗಳ ಹೆಸರನ್ನು ಕಾಲಂ ನಂ. 9ರಲ್ಲಿ ತಂದು ಕಾಲೋಚಿತಗೊಳಿಸಿದ್ದೇವೆ ಎಂದರು.

ಒಟ್ಟು 21 ಫಲಾನುಭವಿಗಳಿಗೆ ಹೊಸ ಪಹಣಿ ಪತ್ರ ವಿತರಿಸಲಾಯಿತು. ಈ ವೇಳೆ ತಹಸೀಲ್ದಾರ್ ಮೇಘರಾಜ ನಾಯ್ಕ, ಪುರಸಭೆ ಸದಸ್ಯೆ ಶೈಲಾ ಗೌಡ, ಮೋಹಿನಿ ಗೌಡ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net