

ಕಾರವಾರ: ಜಿಲ್ಲೆಯ ದಾಂಡೇಲಿ ಹಾಗೂ ಯಲ್ಲಾಪುರಕ್ಕೆ ಬುಧವಾರ ಕರೊನಾ ಆಘಾತ ಎದುರಾಗಿದೆ. ದಾಂಡೇಲಿ, ಹಳಿಯಾಳ ಸೇರಿ 37, ಯಲ್ಲಾಪುರದ 16, ಮುಂಡಗೋಡಿನ 3, ಕಾರವಾರದ 4, ಕುಮಟಾದ 6, ಶಿರಸಿಯ 8, ಭಟ್ಕಳದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ದಾಂಡೇಲಿಯಲ್ಲಿ ಇಎಸ್ಐ ಆಸ್ಪತ್ರೆ ಸಿಬ್ಬಂದಿಯಿಂದ ಹಾಗೂ ಧಾರವಾಡಕ್ಕೆ ಹೋಗಿ ಬಂದ ವಕೀಲರಿಂದ ಕಳೆದ ಎರಡು ದಿನದಲ್ಲಿ ಒಟ್ಟು 35 ಜನರಿಗೆ ಕರೊನಾ ಕಂಡುಬಂದಿದೆ. ಮಂಗಳವಾರ 21 ಜನರಲ್ಲಿ, ಬುಧವಾರ 14 ಜನರಲ್ಲಿ ಸೋಂಕು ಕಂಡುಬಂದಿದೆ. ಅದರಲ್ಲಿ ಮೂವರು ಮಕ್ಕಳು, ವೃದ್ಧರೂ ಕೂಡ ಇದ್ದಾರೆ. ಬಸವೇಶ್ವರ ನಗರ ಒಂದರಲ್ಲೇ 22 ಜನರಿಗೆ ರೋಗ ಖಚಿತವಾಗಿದ್ದು, ಟೌನ್ಶಿಪ್, ಸುಭಾಷ್ ನಗರದ ಹಲವರಿಗೆ ರೋಗ ಕಂಡುಬಂದಿದೆ. ಬಹುತೇಕ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಬ್ಯಾಂಕ್ ಸಿಬ್ಬಂದಿಗೆ: ಇಲ್ಲಿನ ಪ್ರಮುಖ ಬ್ಯಾಂಕ್ ಒಂದರ ಪ್ರಧಾನ ಕಚೇರಿಯ ಒಬ್ಬ ನೌಕರನಿಗೆ ಈ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಈಗ ಅದೇ ಬ್ಯಾಂಕ್ನ ಮತ್ತೂ ಮೂವರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಬ್ಯಾಂಕ್ನ ಏಳು ನೌಕರರಿಗೆ ಕರೊನಾ ಬಂದಂತಾಗಿದೆ. ಜತೆಗೆ ನಗರದ ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ನೌಕರರಿಗೂ ಸೋಂಕು ತಗುಲಿದೆ. ಮಾರಿಕಾಂಬಾ ದೇವಾಲಯದ ಸಿಬ್ಬಂದಿಗೆ ಈ ಹಿಂದೆ ಕೋವಿಡ್ ಬಂದಿದ್ದು, ಅವರ ಸಂಪರ್ಕದಿಂದಲೇ ಈ ಸಂಸ್ಥೆಯ ಉಳಿದವರಿಗೆ ರೋಗ ಹಬ್ಬಿರಬಹುದು ಎನ್ನಲಾಗಿದೆ. ಕಲ್ಲಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
ನರ್ಸ್ಗಳಿಗೆ ಸೋಂಕು: ಮುಂಡಗೋಡ ತಾಲೂಕು ಆಸ್ಪತ್ರೆಯ ಒಬ್ಬ ಗರ್ಭಿಣಿ ಸೇರಿ ಮೂವರು ನರ್ಸ್ಗಳಿಗೆ ಕರೊನಾ ದೃಢಪಟ್ಟಿದೆ. ಆಸ್ಪತ್ರೆಯ ವೈದ್ಯರಿಗೆ ರೋಗ ಬಂದಿತ್ತು. ಅವರಿಂದ ನರ್ಸ್ಗಳಿಗೂ ಹಬ್ಬಿದೆ. ಇಬ್ಬರು ಪಟ್ಟಣದ ಆನಂದ ನಗರದ ನಿವಾಸಿಯಾಗಿದ್ದರಿಂದ ಆನಂದ ನಗರ ಬಡಾವಣೆಯನ್ನು ತಾಲೂಕು ಆಡಳಿತ ಸೀಲ್ ಮಾಡಿದೆ. ಇನ್ನೊಬ್ಬರು ಶಿರಸಿ ಬಿಸಲಕೊಪ್ಪದಿಂದ ಓಡಾಡುತ್ತಿದ್ದರು.
ಕಾರ್ಖಾನೆಯಲ್ಲಿ ಹಬ್ಬಿದ ಸೋಂಕು: ತಾಲೂಕಿನ ಬಿಣಗಾದ ಕಾರ್ಖಾನೆಗೆ ಹೊರ ಊರಿನಿಂದ ಬಂದ ಇಬ್ಬರಿಗೆ ಈ ಹಿಂದೆ ಕರೊನಾ ಕಂಡುಬಂದಿತ್ತು. ಅವರ ಸಂಪರ್ಕಕ್ಕೆ ಬಂದ ಇನ್ನಿಬ್ಬರಲ್ಲಿ ಬುಧವಾರ ಸೋಂಕು ದೃಢಪಟ್ಟಿದೆ. ಕಾರವಾರ ಕೋಡಿಬೀರ ದೇವಸ್ಥಾನದ ವೃದ್ಧೆಗೆ ಸೋಂಕು ತಗುಲಿದೆ. ಫಾದ್ರಿಬಾಗದ ಆಟೋ ಚಾಲಕನೊಬ್ಬನಿಗೆ ಕಡವಾಡ ಮೂಲದ ಸೋಂಕಿತನಿಂದ ರೋಗ ಕಂಡುಬಂದಿದೆ.
ಗೋಕರ್ಣದಲ್ಲಿ ಗಂಗೆಕೊಳ್ಳದ 75 ವರ್ಷದ ವೃದ್ಧೆ ಸೇರಿ ಇಬ್ಬರಿಗೆ ಸೋಂಕು ದೃಢವಾಗಿದೆ. ಜು.9 ರಂದು ಗಂಗಾಮಾತಾ ದೇವಾಲಯದಲ್ಲಿ ನಡೆದ ವಿವಾಹದಲ್ಲಿ ಇವರು ಭಾಗವಹಿಸಿದ್ದರು ಎನ್ನಲಾಗಿದ್ದು, ಸಮಾರಂಭಕ್ಕೆ ಬಂದಿದ್ದ ಇತರರ ಮಾಹಿತಿ ಪಡೆಯುವಲ್ಲಿ ಇಲಾಖೆ ಮುಂದಾಗಿದೆ.
ಯಲ್ಲಾಪುರಕ್ಕೆ ಆತಂಕ: ಯಲ್ಲಾಪುರದಲ್ಲಿ ಒಂದೇ ದಿನ 16 ಜನರಲ್ಲಿ ಕರೊನಾ ಕಂಡುಬಂದಿದೆ. ಅದರಲ್ಲಿ ಐವರು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಉಳಿದವರ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಪಟ್ಟಣದ ಒಂದೇ ಕುಟುಂಬದ ಐವರಿಗೆ, ಸರ್ಕಾರಿ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಸೋಂಕು ದೃಢವಾಗಿದೆ.
ಮೂವರು ಸಾವು: ಅನ್ಯರೋಗಗಳಿಂದ ಬಳಲುತ್ತಿದ್ದ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೂ ಕರೊನಾ ಸೋಂಕು ಖಚಿತವಾಗಿದೆ. ಆದರೆ, ಒಬ್ಬರು ಜಿಲ್ಲೆಯ ಹೊರಗೆ ಮೃತಪಟ್ಟಿದ್ದರಿಂದ ಜಿಲ್ಲೆಯಲ್ಲಿ ಕರೊನಾದಿಂದ ಸಾವನ್ನಪ್ಪಿದವರ ಪಟ್ಟಿಯಲ್ಲಿ ಒಬ್ಬರ ಹೆಸರು ಮಾತ್ರ ಸೇರ್ಪಡೆಯಾಗಲಿದೆ.
ಕ್ಯಾನ್ಸರ್ನಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾ ಅಗಸೂರಿನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮರಣಾನಂತರ ಅವರಿಗೂ ಕರೊನಾ ಖಚಿತವಾಗಿದೆ. ಈ ಮೊದಲು ಅವರು ಕಾರವಾರ ಕ್ರಿಮ್ಸ್ಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ಕಳಿಸುವಾಗ ನಡೆಸಿದ ಗಂಟಲ ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು. ಆದರೆ, ಮರಣಾ ನಂತರದ ವರದಿ ಪಾಸಿಟಿವ್ ಆಗಿದೆ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಭಟ್ಕಳ ಹೆಬಳೆ ತೆಂಗಿನಗುಂಡಿಯ 43 ವರ್ಷದ ಯುವಕ ಮಂಗಳವಾರ ಮೃತಪಟ್ಟಿದ್ದು, ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಕರೊನಾ ದೃಢಪಟ್ಟಿದೆ. ಹಲವು ದಿನಗಳಿಂದ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಏಳು ಜನರ ಬಿಡುಗಡೆ : ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರೊನಾದಿಂದ ಮುಕ್ತಿ ಪಡೆದ ಏಳು ಜನರನ್ನು ಬುಧವಾರ ಬಿಡುಗಡೆ ಮಾಡಲಾಯಿತು. ಭಟ್ಕಳ, ಕಾರವಾರ, ಹಳಿಯಾಳದ ತಲಾ ಇಬ್ಬರು ಜೊಯಿಡಾದ ಒಬ್ಬರನ್ನು ಮನೆಗೆ ಕಳಿಸಲಾಗಿದೆ. ಅದರಲ್ಲಿ 65 ವರ್ಷದ ಒಬ್ಬ ವೃದ್ಧ ಹಾಗೂ ಇಬ್ಬರು ಹೆಣ್ಣು ಮಕ್ಕಳೂ ಸೇರಿದ್ದಾರೆ.