ದಸಂಸ ಪದಾಧಿಕಾರಿಗಳ ಪ್ರತಿಭಟನೆ

18 HANUR 2
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ದಲಿತರಿಗೆ ಭೂಮಿ, ವಸತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಹನೂರಿನಲ್ಲಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್ ಕಚೇರಿ ಮುಂಭಾಗ ಸೇರಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಭೂಮಿ, ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಅಗತ್ಯ ಮೂಲಸೌಕರ್ಯ ಪಡೆಯುವ ಸಲುವಾಗಿ ದಲಿತರು ಸರ್ಕಾರದೊಂದಿಗೆ ಹೋರಾಟ ನಡೆಸುತ್ತಲೇ ಇದ್ದಾರೆ. ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಬಂಡವಾಳಶಾಹಿಗಳಿಗೆ ಸ್ವಾಧೀನಪಡಿಸಿಕೊಳ್ಳುತ್ತಿರುವುದು ದಲಿತರಿಗೆ ಅನ್ಯಾಯವೆಸಗುವ ಕುತಂತ್ರವಾಗಿದೆ ಎಂದು ದೂರಿದರು.

ದರಖಾಸ್ತು ಭೂಮಿ ಸಕ್ರಮೀಕರಣ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿದೆ. ರೈತರು ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗಿಲ್ಲ. ಈ ದೆಸೆಯಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಸಾಗುವಳಿ ಜಮೀನನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ಪರಿಶಿಷ್ಟರ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿಯನ್ನು ಮಾನ್ಯ ಮಾಡದೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಾಲೂಕಿನ ಸುಳವಾಡಿ ವಿಷ ದುರಂತ ಪ್ರಕರಣದ ಸಂತ್ರಸ್ತರಿಗೆ ಜಮೀನು ಹಾಗೂ ವಸತಿ ನೀಡುವುದಾಗಿ ಸರ್ಕಾರ ಘೋಷಿಸಿ 6 ವರ್ಷಗಳಾದರೂ ನೀಡಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಮನೆ ಹಾಗೂ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಶಿರಸ್ತೇದಾರ್ ನಾಗೇಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಾದೇಶ್, ಪದಾಧಿಕಾರಿಗಳಾದ ರಾಮಲಿಂಗಂ, ಕೆಂಪರಾಜು, ಮುನಿಯಪ್ಪ, ಗೋವಿಂದ, ಮರಿಯಮ್ಮ, ಚಿಕ್ಕತಾಯಮ್ಮ, ಮಲ್ಲಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net