ದಲಿತರಿಗೆ ಸ್ಮಶಾನ ಭೂಮಿ ನೀಡದಿದ್ದರೆ ಹೋರಾಟ

Oplus_131072
Oplus_131072
Published on

ನಂಜನಗೂಡು: ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರು ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಜಿಲ್ಲಾ ಮತ್ತು ತಾಲೂಕು ಆಡಳಿತ ಸ್ಮಶಾನ ಭೂಮಿಯನ್ನು ನೀಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಹೇಳಿದರು.

ನಂಜನಗೂಡು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ದಲಿತರ ಜ್ವಲಂತ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಇನ್ನು ಕೆಲವು ಗ್ರಾಮಗಳಲ್ಲಿ ದಲಿತರ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದಿರುವುದು ಬೇಸರ ತಂದಿದೆ. ಜಮೀನಿಗೆ ರಸ್ತೆ ಮತ್ತು ಚಕ್ರ ಇನಾಂ ಪರಭಾರೆ ಆಗಿರುವುದು ಮತ್ತು ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ದಲಿತರ ವಸತಿ ಮತ್ತು ಭೂಮಿ ನಿವೇಶನ ಸಮಸ್ಯೆಗಳನ್ನು ಬಗೆಹರಿಸುವಂತೆ ತಾಲೂಕು ಆಡಳಿತಕ್ಕೆ ಒತ್ತಾಯಿಸುತ್ತೇವೆ. ಒಂದು ವೇಳೆ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸಮಿತಿ ಸದಸ್ಯರಾದ ಕಂದೇಗಾಲ ಶಿವಣ್ಣ, ದಸಂಸ ಮುಖಂಡ ಮರಿಸ್ವಾಮಿ, ಚಿಕ್ಕಮಲ್ಲಯ್ಯ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಪದಾಧಿಕಾರಿಗಳು: ನಂಜನಗೂಡು ತಾಲೂಕು ಸಂಯೋಜಕರಾಗಿ ಶಿವರಾಜು ಗಟ್ಟವಾಡಿಪುರ, ಜಿಲ್ಲಾ ಸಮಿತಿ ಸದಸ್ಯರಾಗಿ ಕಳಲೆ ಕುಮಾರ್, ಸಂಘಟನಾ ಸಂಯೋಜಕರಾಗಿ ಬಿಳಿಗೆರೆ ಸೋಮಣ್ಣ, ಮಲ್ಕುಂಡಿ ಪುಟ್ಟಬುದ್ಧಿ, ಸಿದ್ದರಾಜು, ಖಜಾಂಚಿಯಾಗಿ ರವಿ ಕೆರೆಹುಂಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ, ಚಿಕ್ಕಣ್ಣ, ರಾಜಶೇಖರ್, ಜ್ಯೋತಿ ಪ್ರಕಾಶ್, ಪ್ರಸಾದ್, ಗಜೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net