

ಚನ್ನರಾಯಪಟ್ಟಣ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳು, ರೈತಸಂಘ ಹಾಗೂ ಕಾರ್ಮಿಕ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಕೆ.ಆರ್.ವೃತ್ತದಿಂದ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದರು. ನವೋದಯ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಲ್ಲಿಂದ ಕೆ.ಆರ್.ವೃತ್ತದ ಬಳಿ ಸೇರಿ ವಕೀಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಭೀಮ್‌ಆರ್ಮಿ ಪರಿವರ್ತನಾ ಸಮಾಜದ ಅಧ್ಯಕ್ಷ ರಾಜ್ ಗೋಪಾಲ್ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವರ್ತನೆ ಖಂಡನಾರ್ಹ. ದೇಶದ ಪ್ರಜಾತಂತ್ರ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ವಕೀಲನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡ ಎಚ್.ಎಸ್.ಮಂಜುನಾಥ್ ಮಾತನಾಡಿ, ಶೂ ಎಸೆಯಲು ಯತ್ನಿಸಿದ ಘಟನೆಯ ಹಿಂದೆ ಮನುವಾದಿಗಳ ಪ್ರೇರಣೆ ಇದೆ. ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವಂತೆ ನಡೆದುಕೊಂಡಿರುವ ವಕೀಲನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಸಿ.ಜಿ.ರವಿ ಮಾತನಾಡಿ, ಶೂ ಎಸೆಯಲು ಯತ್ನಿಸಿದ ಘಟನೆ ಪೂರ್ವನಿಯೋಜಿತ ಕೃತ್ಯ. ಎಲ್ಲರೂ ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಇಂಥ ದುರ್ಘಟನೆಗಳು ಇನ್ನಷ್ಟು ನಡೆಯುವ ಸಂಭವವಿದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎನ್.ನಾಗೇಶ್, ಆಲಡಹಳ್ಳ ವೆಂಕಟೇಶ್, ತೇಜಸ್‌ಗೌಡ, ದಂಡಿಗನಹಳ್ಳಿ ರವಿ, ಎಂ.ಆರ್. ರಂಗಸ್ವಾಮಿ, ಸಿ.ಬಿ.ಸೋಮಶೇಖರ್, ಕಲ್ಲೆರೆ ರಂಗಸ್ವಾಮಿ, ಕೆ.ವಿ.ಸತೀಶ್, ಮಹದೇವ್, ಗೋವಿಂದರಾಜು ದಿಂಡಗೂರು, ಗೋವಿಂದರಾಜು, ಲಕ್ಷ್ಮಣ್, ಕುಂದೂರು ರಾಜು, ಯೋಗೀಶ್, ಶಂಕರ್, ಸಿ.ಲಕ್ಷ್ಮಣ್, ಮಾದಿಹಳ್ಳಿ ಮಂಜುನಾಥ್ ಇತರರಿದ್ದರು. ನಂತರ ತಾಲೂಕು ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಜಾವಿದ್ ಪಾಷ, ಜಬಿವುಲ್ಲಾ ಬೇಗ್, ಮುನಾವರ್ ಪಾಷ, ಈಶ್ವರನ್, ಬೆಳಗುಲಿ ಕೆಂಪಯ್ಯ ಮಾತನಾಡಿದರು.