ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

07 yelandur 01
Published on

ಯಳಂದೂರು: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಮೃತೇಶ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.


ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ಯಳಂದೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮೃತೇಶ್ ತಾಲೂಕಿಗೆ ಅಧಿಕಾರಿಯಾಗಿ ಆಗಮಿಸಿದ ದಿನದಿಂದಲೇ ಭ್ರಷ್ಟಾಚಾರ ನಡೆಸಲು ಪ್ರಾರಂಭಿಸಿದರು. ಇಲಾಖೆಯ ವಾಹನ ಚಾಲಕರ ಹುದ್ದೆಗೆ ತರಾತುರಿಯಲ್ಲಿ ಬೇರೆಯವರನ್ನು ನೇಮಕಾತಿ ಮಾಡಿಕೊಂಡಿದ್ದಾರೆ. ಕಳೆದ ಹಲವು ತಿಂಗಳಿಂದ ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ತಾಲೂಕಿನ ಬಡವರ್ಗದ ವ್ಯಕ್ತಿಯನ್ನು ಬಿಟ್ಟು, ಬೇರೆ ವ್ಯಕ್ತಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.


ತಾಲೂಕಿನ ಆಗ್ರೋ ಕೇಂದ್ರಗಳಲ್ಲಿ ಕಳಪೆ ಔಷಧ ಮತ್ತು ಅವಧಿ ಮೀರಿದ ಔಷಧಗಳನ್ನು ಮಾರಾಟ ಮಾಡಿಸುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಗೆ ಜಂಟಿ ನಿರ್ದೇಶಕರು ದಿಢೀರ್ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ. ರೈತರಿಗೆ ನೀಡಿರುವ ಕೆಲವು ಪವರ್ ಟಿಲ್ಲರ್‌ಗಳನ್ನು ಫಲಾನುಭವಿಗಳ ಹತ್ತಿರ ಪಡೆದು ಮಧ್ಯವರ್ತಿಯಾಗಿ ತಮಿಳುನಾಡಿನ ಏಜೆಂಟ್‌ಗಳಿಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಇವುಗಳ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ಕ್ರಮವಹಿಸಬೇಕೆಂದು ಎಂದು ಆಗ್ರಹಿಸಿದರು.


ಖಾಸಗಿ ವ್ಯಕ್ತಿಗೆ ಟ್ರ್ಯಾಕ್ಟರ್ ಗುತ್ತಿಗೆ : ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೃಷಿ ಇಲಾಖೆ ವತಿಯಿಂದ ನೀಡಿದ ಟ್ರ್ಯಾಕ್ಟರ್‌ನ್ನು ಅಲ್ಲಿನ ಆಡಳಿತ ಮಂಡಳಿಯವರು ಖಾಸಗಿ ವ್ಯಕ್ತಿಗೆ ಮರು ಗುತ್ತಿಗೆ ನೀಡಿ ಹೆಚ್ಚು ಹಣ ಪಡೆಯುತ್ತಿದ್ದಾರೆ. ಇದರಿಂದ ರೈತರ ಕೃಷಿ ಭೂಮಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಲಭಿಸದಂತಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಭೂಮಿಯನ್ನು ಉಳುಮೆ ಮಾಡಲು ಆಗುತ್ತಿಲ್ಲ. ಬದಲಿಗೆ ಅಧಿಕ ಹಣ ನೀಡಿ ಖಾಸಗಿ ವ್ಯಕ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.


ಜಿಲ್ಲಾ ಜಂಟಿ ಕೃಷಿ ಇಲಾಖೆ ವಿಷಯ ತಜ್ಞ ಸಂತೋಷ್, ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಜಿಲ್ಲಾ ಸಂಚಾಲಕ ಕಂದಹಳ್ಳಿ ನಾರಾಯಣ್, ತಾಲೂಕು ಸಂಚಾಲಕ ಚಂದ್ರಶೇಖರ್, ಮುಖಂಡರಾದ ಪ್ರಭುಸ್ವಾಮಿ, ವೈ.ಎಂ.ರಂಗನಾಥ, ಭೀಮಪ್ಪ, ರಂಗಸ್ವಾಮಿ, ಸೋಮಣ್ಣ, ಮಹೇಶ್, ಮಂಜು, ಮಾಂಬಳ್ಳಿ ಮಹದೇವಸಿಂಗ್, ಮಲ್ಲರಾಜು, ಪ್ರಭು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net