

ಮದ್ದೂರು: ದಲಿತರಿಗೆ ಪ್ರಾತಿನಿಧ್ಯ ನೀಡಿದರೆ ಸಹಕಾರ ಕ್ಷೇತ್ರ ಸರ್ವನಾಶವಾಗುತ್ತದೆ ಎಂದಿರುವ ಶಾಸಕ ಜಿ.ಟಿ.ದೇವೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಜಮಾಯಿಸಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು, ಜಿ.ಟಿ.ದೇವೇಗೌಡರ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಪರ ಕಾಳಜಿಯಿಂದ ಸಹಕಾರಿ ಕ್ಷೇತ್ರದಲ್ಲಿ ಪರಿಶಿಷ್ಟರಿಗೆ ನಾಮಿನಿ ಮೀಸಲಾತಿ ವಿಧೇಯಕವನ್ನು ಮಂಡಿಸಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ, ಸರ್ವನಾಶ ಮಾಡಿಬಿಡಿ ಎಂದು ಮಾತನಾಡಿದ್ದಾರೆ. ಇದರಿಂದ ರಾಜ್ಯದ ಬಹು ಸಂಖ್ಯಾತರಾದ ದಲಿತ ವರ್ಗಕ್ಕೆ ಮಾನಹಾನಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಗಂಗರಾಜು, ಸಂಘಟನೆಯ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಸುಂದರೇಶ್, ಗ್ರಾಪಂ ಸದಸ್ಯ ಮಾದೇಶ್ ಮುಖಂಡರಾದ ಅಂಬರೀಷ್, ಕೃಷ್ಣ, ಬೋರಯ್ಯ, ದ್ಯಾವಪ್ಪ, ಮನು, ಸಿದ್ಧರಾಮು, ರಾಜು, ಭಾನುಪ್ರಕಾಶ್ ಇದ್ದರು.