

ವಿಜಯವಾಣಿ ಸುದ್ದಿಜಾಲ ಕಾರವಾರ
ಕಾರು ದರೋಡೆ ಮಾಡಲು ಯತ್ನಿಸಿದ ಕಲಬುರಗಿ ಅಫಜಲಪುರದ ಮೂವರನ್ನು ಮಂಕಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸಂಗಮೇಶ ಅಳ್ಳಗಿ, ಸಂತೋಷ ಭಜಂತ್ರಿ, ಶ್ರವಣಕುಮಾರ ಕಲ್ಲೊಳ್ಳಿ ಬಂಧಿತರು. ಎಲ್ಲರೂ ಸಾಕಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.
ಮಂಗಳೂರು ಬಸ್ ನಿಲ್ದಾಣಕ್ಕೆ ಶನಿವಾರ ಬಂದ ಮೂವರು ಅಲ್ಲಿನ ಟ್ಯಾಕ್ಸಿ ನಿಲ್ದಾಣದಲ್ಲಿದ್ದ ಅಬ್ದುಲ್ ರಹೀಂ ಕೋಹಿಲಾ ಅವರ ಟ್ಯಾಕ್ಸಿಯನ್ನು ಬಾಡಿಗೆ ಪಡೆದು ಮುರ್ಡೇಶ್ವರಕ್ಕೆ ಹೋಗೋಣ ಎನ್ನುತ್ತಾರೆ. ಆದರೆ, ಮುರ್ಡೇಶ್ವರ ಸಮೀಪ ಬಂದಾಗ ಶಿರಸಿಗೆ ಹೋಗೋಣ ಎನ್ನುತ್ತಾರೆ. ಮುಂದೆ ತೆರಳಲು ಡೀಸೆಲ್ ಹಾಕಬೇಕು. ಅದಕ್ಕಾಗಿ ಹಣ ನೀಡಿ ಎಂದು ಚಾಲಕ ಕೇಳಿದಾಗ ಮುಂದೆ ಎಟಿಎಂನಲ್ಲಿ ತೆಗೆದುಕೊಡುತ್ತೇವೆ ಎಂದು ಒಪ್ಪಿಸುತ್ತಾರೆ. ಕಾರು ರಾತ್ರಿ 8 ಗಂಟೆಯ ಹೊತ್ತಿಗೆ ಗುಣವಂತೆ ಗ್ರಾಮ ತಲುಪಿದಾಗ ಚಾಲಕನ ಕುತ್ತಿಗೆಗೆ ಚಾಕು ತೋರಿಸಿ, ಚಾವಿ ಕಸಿದು ಪರಾರಿಯಾಗಲು ಯತ್ನಿಸುತ್ತಾರೆ. ಆದರೆ, ಚಾಲಕ ಅಬ್ದುಲ್ ರಹೀಂ ಚೀರಿಕೊಂಡಾಗ ಸುತ್ತಲಿನ ಜನ ಸೇರಿದ್ದರು. ಇದರಿಂದ ಬೆದರಿದ ಮೂವರು ಸಮೀಪದ ಗದ್ದೆಯ ಕಡೆ ಓಡಿ, ಪರಾರಿಯಾಗಿದ್ದರು. ಕಳ್ಳರ ಬೆನ್ನು ಬಿದ್ದ ಮಂಕಿ ಠಾಣೆ ಪಿಎಸ್ಐ ಅಶೋಕ ಮಳಾಬಗಿ, ಅಪರಾಧ ವಿಭಾಗದ ಪಿಎಸ್ಐ ಮುಷಾಹಿದ್ ಅಹಮದ್ ಹೊನ್ನಾವರದಲ್ಲಿ ಮೂವರನ್ನು ಭಾನುವಾರ ಬಂಧಿಸಿದ್ದಾರೆ.