

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಬಳಿಯ ಕ್ರಷರ್ನ ಕಾವಲುಗಾರನಿಗೆ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ಪೋಲಿಸರು ಬಂಧಿಸಿದ್ದಾರೆ.
ಆರೋಪಿ ಅಲ್ಲಾಭಕ್ಷ ಅತ್ತಾವುಲ್ಲಾ ತುಮಕೂರು ಎಂಬಾತನನ್ನು ಪೊಲೀಸರು ಬಂಧಿಸಿ, ದರೋಡೆ ಮಾಡಿದ ಸಾಮಗ್ರಿ, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಮೂವರು ತಲೆಮರೆಸಿಕೊಂಡಿದ್ದಾರೆ.
ಮೋಟೆಬೆನ್ನೂರು ಬಳಿ ರುದ್ರೇಶ ಚೂರಿ ಎಂಬುವರಿಗೆ ಸೇರಿದ್ದ ಗಜಲಕ್ಷ್ಮೀ ಸ್ಟ್ರೋನ್ ಕ್ರಷರ್ಗೆ ಸೆ. 10ರಂದು ನುಗ್ಗಿದ್ದ ತುಮಕೂರು ಮೂಲದ ನಾಲ್ವರು ದರೋಡೆಕೋರರ ತಂಡ, ತಡರಾತ್ರಿ ಕಾವಲುಗಾರಿನಿಗೆ ಚಾಕು ತೋರಿಸಿ, ಅಂದಾಜು ಐದು ಲಕ್ಷ ರೂ. ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ ಕೆ.ಜಿ., ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಾನಂದ ಎಂ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಸವರಾಜ ಪಿ.ಎಸ್, ಪಿಎಸ್ಐ ಮಹಾಂತೇಶ ಎಂ.ಎಂ., ಸಿಬ್ಬಂದಿ ಕೆ.ಎಂ. ಗಡಿಯಪ್ಪಗೌಡ್ರ, ಎಚ್.ಜಿ. ಕಡೇಮನಿ, ಲೋಕೇಶ ಲಮಾಣಿ, ಮೃತ್ಯುಂಜಯ ಎಚ್ ಇತರರು ಕಾರ್ಯಾಚರಣೆ ನಡೆಸಿದ್ದಾರೆ.