ದಕ್ಷಿಣ ಕೊಡಗಿನಲ್ಲಿ ಮುಂದುವರಿದ ವರುಣಾರ್ಭಟ

26 gkp 09
Published on

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು ಅಲ್ಲಲ್ಲಿ ನದಿಗಳು ತುಂಬಿ ಹರಿಯುತ್ತಿವೆ.

ಗೋಣಿಕೊಪ್ಪಲಿನ ಒಂದನೇ ವಿಭಾಗದಲ್ಲಿ ಬುಧವಾರ ತಡರಾತ್ರಿ ಕುನ್ನಯ್ಯ ಎಂಬುವರ ಜಾಗದಲ್ಲಿದ್ದ ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದಿರುವ ಜಾಗದ ಸಮೀಪವೇ ಮನೆಗಳಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾಗಿದೆ. ವಿದ್ಯುತ್ ತಂತಿಗಳು ತುಂಡಾಗಿವೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಹಾಗೂ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದರು.

ಶೆಟ್ಟಿಗೇರಿ ಮತ್ತು ಹೈಸೂಡ್ಲೂರು ಮಧ್ಯೆ ಮರ ಬಿದ್ದು ರಸ್ತೆ ತಡೆ ಉಂಟಾಗಿತ್ತು.

ಪೊನ್ನಂಪೇಟೆ ಹೋಬಳಿಯ ಕಾನೂರು ಗ್ರಾಮದ ರಸ್ತೆಯು ಮಳೆಯಿಂದಾಗಿ ಜಲಾವೃತಗೊಂಡಿದೆ. ಹಾಗೆಯೇ ಈ ಗ್ರಾಮಕ್ಕೆ ತೆರಳಲು ಬದಲಿ ಸಂಪರ್ಕ ರಸ್ತೆಯನ್ನು ಬಳಸಲಾಗುತ್ತಿದೆ.

ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದ ಕೆ.ಎಂ.ನಂಜಪ್ಪ (ಸತೀಶ) ಎಂಬುವರ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದಿದ್ದು. ಕರುವೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಣ್ಣನ ಹಾಡಿ ನೂತನ ಪಕ್ಕ ಸೂಕ್ತ ತಡೆಗೋಡೆ ನಿರ್ಮಿಸದ ಕಾರಣ ಮಳೆಗೆ ತೋಡಿನ ಪಕ್ಕದ ಬರೆ ಕ್ರಮೇಣ ಕುಸಿಯಲು ಅರಂಭವಾಗಿದ್ದು ಹಾಡಿಯ ಜನರಲ್ಲಿ ಸಂಪರ್ಕಕ್ಕೆ ತೊಡಕಾಗುವ ಅತಂಕ ಸೃಷ್ಟಿಯಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net