

ಬಾಗಲಕೋಟೆ: ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳ ಸರ್ಕಾರಗಳಿಗೂ ದಕ್ಷಿಣ ಕರ್ನಾಟಕದ ಮೇಲೆ ಇರುವ ಒಲುವು, ಆದ್ಯತೆ ಉತ್ತರ ಕರ್ನಾಟಕದ ಪರವಾಗಿ ಏಕಿಲ್ಲ? ನಿಮ್ಮ ಈ ನಿರ್ಲಕ್ಷ್ಯದಿಂದಲೇ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಕೇಳು ಬರುತ್ತಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸರ್ಕಾರಕ್ಕೆ ಖಡಕ್ಕಾಗಿ ಪ್ರಶ್ನಿಸಿದ್ದಾರೆ.
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದ ಹತ್ತನೇ ದಿನವಾದ ಗುರುವಾರ ಧರಣಿಯಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ಸರ್ಕಾರದ ಈ ನಿಲುವು ಸರಿಯಲ್ಲ. ಯಾವುದೇ ಭಾಗ, ಜಿಲ್ಲೆ ಇರಲಿ ಅವುಗಳಿಗೆ ಬಂದ ಅದಾಯದಲ್ಲಿ ಸಮಾನರೂಪದ ಹಂಚಿಕೆ ಆಗಬೇಕು. ಎಲ್ಲರಿಗೂ ಸರಿಸಮಾನವಾದ ನ್ಯಾಯ ಸಿಗಬೇಕು. ಈ ತಾರತಮ್ಯೆ ನೋಡಿಯೇ ಹಿಂದೆ ಉಮೇಶ ಕತ್ತಿ ಅವರು ಬಹಳ ಸಲ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು. ಅವರ ಈ ಬೇಡಿಕೆಯ ಹಿಂದೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪೂಜ್ಯರು ಹೇಳಿದರು.
ಉತ್ತರ ಕರ್ನಾಟಕದ ಬಗ್ಗೆ ಈ ನಿರ್ಲಕ್ಷ್ಯ ಮುಂದುವರೆದರೆ ಕರ್ನಾಟಕ ವಿಭಾಗೀಕರಣ ಮಾಡುವ ಹಂತಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ. ಅಖಂಡ ಕರ್ನಾಟಕ ಉಳಿಯಬೇಕು. ಒಂದಗಿ ಬಲಿಷ್ಠ ಕರ್ನಾಟಕದಲ್ಲಿ ಒಗ್ಗಟ್ಟು ಇರಬೇದಾದರೆ ಸರ್ಕಾರಗಳು ಯಾವುದೇ ಪಕ್ಷದ್ದು ಇದ್ದರೂ ದಕ್ಷಿಣ ಕರ್ನಾಟಕಕ್ಕೆ ಕೊಡುವ ಆದ್ಯತೆಯನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೂ ಕೊಡಬೇಕು ಎಂದು ಸಲಹೆ ನೀಡಿದರು.
ರೈತ, ಒಕ್ಕಲತನ, ಒಕ್ಕಲಿಗ ಈ ದೇಶದ ಬೆನೆಲುಬು ಎನ್ನುತ್ತೇವೆ. ಆದರೆ, ಅದೇ ರೈತರ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ದೇಶದ ಬೆಳವಣಿಗೆಗೆ ಕೈಗಾರಿಕೆಗಳಿಗೆ ಪ್ರಗತಿ ಸರಿ. ಆದರೆ, ಬರೀ ಕೈಗಾರಿಕೆಗಳಿಂದಲೇ ಜನರ ಹೊಟ್ಟೆ ತುಂಬಲ್ಲ. ಹೊಟ್ಟೆ ತುಂಬಿಸುವುದು ಈ ದೇಶದ ರೈತರು. ಯಾವುದೇ ರಾಜ್ಯ, ದೇಶ ಅಭಿವೃದ್ಧಿ ಹೊಂದಿದೆ ಎಂದು ತೋರಿಸಬೇಕಾದರೆ ಅಲ್ಲಿನ ರೈತರು ಸಂತೋಷದಿAದ ಬದುಕಿದಾಗ ಮಾತ್ರ ಅದು ಅಭಿವೃದ್ಧಿ ಎನ್ನಬಹುದು ಎಂದರು.
ದೇಶದಲ್ಲಿ ಯಾವುದೋ ಒಂದು ಯೋಜನೆ ಕಾಲಾವದಿಯಲ್ಲಿ ಪೂರ್ಣವಾದರೆ ಮಾತ್ರ ಅದು ಕಡಿಮೆ ವೆಚ್ಚದಲ್ಲಿ ಯೋಜನೆ ಸಂಪನ್ನವಾಗಲು ಸಾಧ್ಯ. ವಿಳಂಬ ನೀತಿ ಅನುಸರಿಸಿದರೆ ಕೆಲವೂ ಅಚ್ಚುಕಟ್ಟಾಗಿ ಆಗಲ್ಲ. ವೆಚ್ಚವೂ ಹೆಚ್ಚಾಗುತ್ತದೆ. ೧೯೬೩ರಲ್ಲಿ ೫೦೦ ಕೋಟಿ ರೂ.ಗಳಲ್ಲಿ ಮುಗಿಯಬದಾಗಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಇವತ್ತು ಲಕ್ಷಾಂತರ ಕೋಟಿ ರೂ. ಖರ್ಚು ಮಾಡಿದರೂ ಪೂರ್ಣವಾಗಲ್ಲ ಎಂದರೆ ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯ, ಆಲಕ್ಷ್ಯ, ವಿಳಂಬ ನೀತಿ ಕಾರಣ ಎಂದು ಬೇಸರ ಹೊರಹಾಕಿದರು.
ಕೊಣ್ಣೂರ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ನಾನು ಸಹ ಈ ಸಂತ್ರಸ್ತರಗೆ ಸೇರಿದವರು. ಈ ಹೋರಾಟವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋದರು ನಾವು ಸಹ ಇದರಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ಇಳಿಯಲು ಸಿದ್ದರಿದ್ದೇವೆ. ಸ್ವಾಮೀಜಿಗಳು ಎಂದರೆ ಅವರಿಗೆ ಕಾಣಿಕೆ ಕೊಡಬೇಕು ಎನ್ನುವ ಭಾವನೆ ಹೋರಾಟಗಾರರಿಗೆ ಬೇಡ. ನಿಮ್ಮಿಂದಾಗಿಯೇ ನಮ್ಮ ಮಠಗಳು ಆಗಿರುವುದು. ಸಂತ್ರಸ್ತರ ನೋವು ಏನು ಎನ್ನುವುದು ಖುದ್ದಾಗಿ ನಮಗೆ ಗೊತ್ತಿದೆ. ನಮಗೆ ನೀವು ಉಪವಾಸ ಕೂಡುವಂತೆ ಹೇಳಿದರೂ ಅದಕ್ಕೆ ಒಪ್ಪಿಗೆ ಇದೆ. ಬಾಗಲಕೋಟೆ, ಬೆಳಗಾವಿ, ಬೆಂಗಳೂರ, ದೆಹಲಿ ಹೀಗೆ ಹೋರಾಟವನ್ನು ನೀವು ಎಲ್ಲಿಗೆ ಕೊಂಡೊಯ್ದರು ನಾವು ನಮ್ಮ ಸ್ವಂತ ಖರ್ಚಿನಲ್ಲಿ ಹೋರಾಟಕ್ಕೆ ಬರುತ್ತೇವೆ ಎಂದರು.
ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ನಮ್ಮ ಭಾಗಕ್ಕೆ ಶಾಪವಾಗಿದೆ. ೬೦ ವರ್ಷದಿಂದ ನಮಗೆ ಈ ಕಂಟಕ ಶುರುವಾಗಿದೆ. ನಮ್ಮ ಮಠದ ೩೨ ಎಕರೆ ಜಮೀನು ಯೋಜನೆಗೆ ಮುಳುಗಡೆ ಆಗಿದೆ. ನಮಗೆ ಬಂದಿದ್ದು, ೧೦ ರಿಂದ ೧೫ ಲಕ್ಷ ರೂ. ಮಾತ್ರ. ಇದೇ ರೀತಿ ರೈತರ ಪರಿಸ್ಥಿತಿಯೂ ಇದೆ. ಆರ್‌ಸಿ ಗಳ ಪರಿಸ್ಥಿತಿ ಬಹಳ ಅಧೋಗತಿಯಲ್ಲಿವೆ. ಈ ಅನ್ಯಾಯದ ಬಗ್ಗೆ ಗಮನ ಹರಿಸಿ, ಈ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ನಾಡಿನ ಎಲ್ಲ ಮಠಾಽÃಶರು ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಹೇಳಿದರು.
ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯರು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು, ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕುಂದರಗಿಯ ವೀರಸಂಗಮೇಶ್ವರ ಶಿವಾಚಾರ್ಯರು, ಕೋಲಾರ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ, ನಾಗರಾಳದ ಶೇಷಪ್ಪಯ್ಯ ಸ್ವಾಮೀಜಿ, ಬೀಳಗಿ ಹುಚ್ಚಪ್ಪಯ್ಯನ ಮಠದ -Àಕೀರೇಶ್ವರ ಸ್ವಾಮೀಜಿ, ಬೀಳಗಿ ಬ್ರಹನ್ಮಠದ ಶಿವಾನಂದ ದೇವರು ಮತ್ತಿತರ ಹರ-ಗುರು, ಚರಮೂರ್ತಿಗಳು ಧರಣಿಗೆ ಬೆಂಬಲ ನೀಡಿ, ಭಾಗವಹಿಸಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಮುರುಗೇಶ್ ನಿರಾಣಿ, ಅಜಯಕುಮಾರ ಸರನಾಯಕ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.