ದಂತ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಚಿಕಿತ್ಸೆ

bkt-16-4
ಬಾಗಲಕೋಟೆ ನಗರದ ಬಿವಿವಿ ಸಂಘದ ಪಿ.ಎಂ.ಎನ್.ಎಂ ದಂತ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹುಬ್ಬಳ್ಳಿಯ ಎಚ್.ಸಿ.ಜಿ ಕ್ಯಾನ್ಸರ್ ಸಂಸ್ಥೆಯ ಜತೆಗೆ ಒಡಂಬಡಿಕೆ ಕಾರ್ಯಕ್ರಮ ಜರುಗಿತು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಡಾ.ಶ್ರೀನಿವಾಸ ವನಕಿ, ಡಾ.ಕಾಶೀನಾಥ ಅರಬ್ಬಿ, ಡಾ.ಸತ್ಯಜೀತ್ ದುಂಡಗಿ ಇದ್ದರು.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಪಿ.ಎಂ.ಎನ್.ಎಂ. ದಂತ ಮಹಾವಿದ್ಯಾಲಯವು ಹುಬ್ಬಳ್ಳಿಯ ಎಚ್.ಸಿ.ಜಿ. ಕ್ಯಾನ್ಸರ್ ಸಂಸ್ಥೆಯ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇನ್ನು ಮುಂದೆ ಪಿ.ಎಂ.ಎನ್.ಎಂ. ದಂತ ಆಸ್ಪತ್ರೆಯಲ್ಲಿ ಬಾಯಿ ಕ್ಯಾನ್ಸರ್‌ಗೆ ಸಂಬಂಧಿಸಿದ ರೇಡಿಯೇಷನ್ ಥೆರಪಿ ಮತ್ತು ಕಿಮೋ ಥೆರಪಿಗಳಂತಹ ಚಿಕಿತ್ಸೆಗಳನ್ನು ರಿಯಾಯ್ತಿ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುವುದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಪಿ.ಎಂ.ಎನ್.ಎಂ ದಂತ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಿವಿಧ ವಿಭಾಗಗಳ ಹಾಗೂ ಉಪಕರಣ ಉದ್ಘಾಟನೆ ಮತ್ತು ಹುಬ್ಬಳ್ಳಿಯ ಎಚ್.ಸಿ.ಜಿ ಕ್ಯಾನ್ಸರ್ ಸಂಸ್ಥೆಯ ಜತೆಗೆ ಒಡಂಬಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿವಿವಿ ಸಂಘದ ಪಿ.ಎಂ.ಎನ್.ಎಂ ದಂತ ಮಹಾವಿದ್ಯಾಲಯವು ೧೯೮೭ ರಿಂದ ಈ ಭಾಗದಲ್ಲಿ ದಂತ ಚಿಕಿತ್ಸಾ ಸಂಬಂಧಿತ ಕಾಯಿಲೆಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನವನಗರದ ವೈದ್ಯಕೀಯ ಕಾಲೇಜು ಆವರಣದ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ದಂತ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಅಧುನಿಕ ಉಪಕರಣ ಖರೀದಿಸಿ ಉತ್ತಮ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ ಎಂದರು.

ಚಿಕ್ಕಮಕ್ಕಳಿಗೆ ದಂತ ಚಿಕಿತ್ಸೆ ನೀಡುವಾಗ ಅವರಿಗೆ ಯಾವುದೇ ತರಹದ ನೋವು ಆಗದಂತೆ ಮಕ್ಕಳಿಗೆ ಮನರಂಜನೆಗಾಗಿ ಆಟದ ಮೈದಾನ ಮಾಡುವ ಮೂಲಕ ಅವರಿಗೆ ಮನರಂಜನೆಯ ಜನತೆಗೆ ಚಿಕಿತ್ಸೆ ನೀಡಲು ಮೈದಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ದಂತ ರಕ್ಷಣಾ ವಿಭಾಗದಲ್ಲಿ ೧೫ ಲಕ್ಷ ರೂ. ವೆಚ್ಚದಲ್ಲಿ ಎರಡು ಎಂಡೋ ಮೈಕ್ರೋಸ್ಕೋಪ್ ಅಳವಡಿಸಲಾಗಿದೆ. ಇದರಿಂದ ಆರ್‌ಸಿಟಿ ಚಿಕಿತ್ಸೆ ಬಹಳ ಅನುಕೂಲವಾಗಲಿದೆ. ೭೦ ಲಕ್ಷ ರೂ.ಗಳಲ್ಲಿ ವಿಶೇಷ ದಂತ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ಇಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಚಿಕಿತ್ಸೆ ಒಂದೇ ವಿಭಾಗದಲ್ಲಿ ಲಭ್ಯವಾಗಲಿವೆ. ನುರಿತ ತಜ್ಞರು ಇಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಬಾಯಿ ಕ್ಯಾನ್ಸರ್ ಚಿಕಿತ್ಸಾ ಘಟಕ : ಉನ್ನತ ಶ್ರೇಣಿಯ ಬಾಯಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭಿಸಲಾಗಿದ್ದು ಎಲ್ಲ ಸೌಲಭ್ಯ ಇಲ್ಲಿ ದೊರೆಯುವುದರಿಂದ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದರು.

ಅತ್ಯಾಧುನಿಕ ಸಿಬಿಸಿಟಿ ಉಪಕರಣ ಅಳವಡಿಕೆ : ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸಿಬಿಸಿಟಿ ಉಪಕರಣ ಖರೀದಿಸಿದ್ದು, ಇಂತಹ ಉಪಕರಣ ಹೊಂದಿರುವ ಜಿಲ್ಲೆಯಲ್ಲಿ ಏಕೈಕ ದಂತ ಆಸ್ಪತ್ರೆ ಇದಾಗಿದೆ. ಇದು ಮುಖದ ಪೂರ್ಣ ಭಾಗವನ್ನು ಪರೀಕ್ಷೆ ಮಾಡಲು ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಡಾ.ಶ್ರೀನಿವಾಸ ವನಕಿ, ಡಾ.ಕಾಶೀನಾಥ ಅರಬ್ಬಿ, ಡಾ.ಸತ್ಯಜೀತ್ ದುಂಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net