ತೋಟಗಾರಿಕೆ ಮೇಳಕ್ಕೆ ಸಕಲ ಸಿದ್ದತೆ

bkt-19-1
ಬಾಗಲಕೋಟೆ ತೋವಿವಿ ಆವರಣದಲ್ಲಿ ಹೊಸ ತಳಿಗಳ ತರಕಾರಿ ತಾಕುಗಳ ಪ್ರಾತ್ಯಕ್ಷಿಕೆಗಳ ಕುರಿತು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಶಿಕ್ಷನ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದಿನ ಇದ್ದರು.
Published on

ಬಾಗಲಕೋಟೆ: ತೋಟಗಾರಿಕೆ ಉದ್ಯಾನಗಿರಿಯ ಮುಖ್ಯ ಆವರಣದಲ್ಲಿ ಡಿ.೨೧ ರಿಂದ ೨೩ ವರೆಗೆ ನಡೆಯಲಿರುವ ತೋಟಗಾರಿಕೆ ಮೇಳಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋವಿವಿಯ ಆವರಣದಲ್ಲಿರುವ ರೈತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮೇಳದಲ್ಲಿ ೧೦೦ ಸುಸಜ್ಜಿತ, ೧೦೦ ಸಾಮಾನ್ಯ, ೧೫ ಯಂತ್ರೋಪಕರಣಗಳ ಹಾಗೂ ೧೫ ಆಹಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ತೋಟಗಾರಿಕೆಯಲ್ಲಿ ಬಳಸಬಹುದಾದ ವಿವಿಧ ಕೃಷಿ ಪರಿಕರಗಳಾದ ಬೀಜಗಳು, ಸಸಿಗಳು, ಕೀಟನಾಶಕಗಳು, ಗೊಬ್ಬರಗಳು, ಯಂತ್ರೋಪಕರಣಗಳ ಮಾರಾಟ ಹಾಗೂ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ಡಿ.೨೧ ರಂದು ಬೆಳಗ್ಗೆ ೧೧ ಗಂಟೆಗೆ ಜರಗುವ ತೋಟಗಾರಿಕೆ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉಪಸ್ಥಿತರಿರುವರು. ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಇತರೆ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಮೊದಲ ದಿನ ೨೪ ಜಿಲ್ಲೆಯ ಪೈಕಿ ೮ ಶ್ರೇಷ್ಠ ತೋಟಗಾರಿಕೆ ರೈತರನ್ನು ಸನ್ಮಾನಿಸಲಾಗುತ್ತಿದೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಮಳಿಗೆ, ವಿವಿಧ ಪ್ರಾತ್ಯಕ್ಷಿಕೆಗಳನ್ನು ಉದ್ಘಾಟನೆ, ಮಧ್ಯಾಹ್ನ ವಿಚಾರ ಗೋಷ್ಠಿಗಳು ಜರುಗಲಿವೆ ಎಂದು ತಿಳಿಸಿದರು.

ಎರಡನೇ ದಿನ ಡಿ.೨೨ ರಂದು ೮ ಜಿಲ್ಲೆಗಳ ಫಲಶ್ರೇಷ್ಠ ರೈತರನ್ನು ಗೌರವಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಜವಳಿ, ಸಹಕಾರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಲಿದ್ದಾರೆ. ನಂತರ ತಾಂತ್ರಿಕಗೋಷ್ಠಿ ನಡೆಯಲಿವೆ. ಡಿ.೨೩ ರಂದು ಮದ್ಯಾಹ್ನ ೨ ಗಂಟೆಗೆ ರಾಷ್ಟ್ರೀಯ ರೈತ ದಿನಾಚರಣೆ ಆಚರಣೆಯೊಂದಿಗೆ ೮ ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಮೇಳದಲ್ಲಿ ವಿಶ್ವವಿದ್ಯಾಲಯ ಹಾಗೂ ಇನ್ನಿತರೆ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಲಾದ ತಳಿಗಳು ಹಾಗೂ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳು, ರೈತರಿಗಾಗಿ ತಾಂತ್ರಿಕ ಸಲಹಾ ಕೇಂದ್ರ ಹಾಗೂ ಶ್ವಾನ ಮತ್ತು ಮತ್ಸ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ವಿಶೇಷವಾಗಿ ಕ್ಷೇತ್ರ ಪ್ರಾತ್ಯಕ್ಷಿಕೆಗಳು, ವಿಷಯಾಧಾರಿತ ಸಮುಚ್ಛಯಗಳು, ಒಳಾಂಗಣ ಪ್ರದರ್ಶನ, ವಿಶೇಷ ಮಾರಾಟ ಮಳಿಗೆಗಳನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಬರುವ ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಪ್ರಾರಂಭದಲ್ಲಿ ತೋವಿವಿಯ ಆವರಣದಲ್ಲಿ ಬೆಳೆದ ವಿವಿಧ ತರಹದ ಪುಷ್ಪ, ಹೊಸ ತಳಿಗಳ ತರಕಾರಿ ತಾಕುಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಿದರು.

ಈ ಸಂದರ್ಭದಲ್ಲಿ ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಶಿಕ್ಷನ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದಿನ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ರಾಮಚಂದ್ರ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net