ತೋ.ವಿ.ವಿ.ಗೆ ಸಂಸ್ಥೆ ಸ್ಥಳಾಂತರಿಸಿದರೆ ಉಗ್ರಹೋರಾಟ

1044cf7e-9ee0-4d83-b058-b1b5016e1d18
ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆಯಲ್ಲಿ ಹಿಂದೆ ಬಿಜೆಪಿ ಸರ್ಕಾರ ಸ್ಥಾಪನೆ ಮಾಡಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಯಾವುದೇ ಕೇಂದ್ರಗಳನ್ನು ಮಂಡ್ಯದ ನೂತನ ವಿವಿಗೆ ಸ್ಥಳಾಂತರ ಮಾಡಿದರೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದರು.

ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ನಿರಾಣಿ, ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ತಾವು ಕೈಗಾರಿಕೆ ಸಚಿವರಾಗಿದ್ದಾಗ ಮುಳುಗಡೆ ಬೀಳಗಿ ಕ್ಷೇತ್ರಕ್ಕೆ ತೋಟಗಾರಿಕೆ ವಿವಿ ಮಂಜೂರ ಮಾಡಿಸಿದ್ದೆ. ಅಲ್ಲಿ ಜಮೀನು ಲಭ್ಯವಾಗದ ಕಾರಣಕ್ಕೆ ನಮ್ಮ ಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆಯಲ್ಲಿ ಸ್ಥಾಪನೆ ಮಾಡಿದ್ದೇವು. ವಿವಿಗೆ ಅಗತ್ಯ ಸೌಕರ್ಯ ಸಹ ಒದಗಿಸಿದ್ದೇವು. ಆದರೆ, ಇದೀಗ ಅದನ್ನು ಇನ್ನಷ್ಟು ಬಲಪಡಿಸುವ ಬದಲಿಗೆ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿರುವುದನ್ನು ಖಂಡಿಸುವುದಾಗಿ ಹೇಳಿದರು.

ಮೊದಲೇ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ಕೂಗು ಇದೆ. ಸರ್ಕಾರ ಇಲ್ಲಿಗೆ ಹೊಸದಾಗಿ ಕೊಡುವ ಬದಲಿಗೆ ನಾವು ತಂದಿದ್ದನ್ನು ಸಹ ಕಿತ್ತುಕೊಂಡು ಹೋಗುತ್ತಾರೆ ಎಂದರೆ ಅದಕ್ಕೆ ನಮ್ಮ ವಿರೋಧ ಇದೆ. ಇದನ್ನು ನಿಲ್ಲಿಸದಿದ್ದರೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸರ್ಕಾರದ ಕ್ರಮದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ ಜೀವನ ನೀಡಿದೆ. ಅಂದು ಜಿಲ್ಲೆಯ ಜನರು ಕೈಹಿಡಿಯದಿದ್ದರೆ ಅಂದೆ ಸಿದ್ದರಾಮಯ್ಯ ರಾಜಕೀಯ ಅಂತ್ಯವಾಗುತ್ತಿತ್ತು. ಇವತ್ತು ಮತ್ತೆ ಸಿಎಂ ಆಗಿದ್ದರೆ ಅದಕ್ಕೆ ಬಾದಾಮಿ ಜನರು ಕಾರಣ. ಅದಕ್ಕಾಗಿ ಸಿದ್ದರಾಮಯ್ಯ ಅವರು ಇಲ್ಲಿನ ನೀರಾವರಿ, ಶಿಕ್ಷಣ, ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಬೀಳಗಿ ಶಾಸಕರ ವಿರುದ್ಧ ನಿರಾಣಿ ಆಕ್ರೋಶ :

ಇನ್ನು ಬೀಳಗಿ ಕ್ಷೇತ್ರದಲ್ಲಿ ಹಿಂದೆ ನಾನು ತಂದಿದ್ದ ಅನುದಾನದ ಕಾಮಗಾರಿಗಳು ನಡೆದಿವೆ ವಿನಃ ಹಾಲಿ ಶಾಸಕ ಜೆ.ಟಿ.ಪಾಟೀಲ ಯಾವುದೇ ಹೊಸ ಕಾಮಗಾರಿ, ಅನುದಾನ ತಂದಿಲ್ಲ. ಮುಖ್ಯವಾಗಿ ತಾವು ಕ್ಷೇತ್ರದಲ್ಲಿ ೪೦೦ ಗುಡಿಗಳಿಗೆ ಅಂದಾಜು ೪ ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದೆ. ಜೆ.ಟಿ.ಪಾಟೀಲ ಅವರು ಬಂದ ಬಳಿಕ ಅವೆಲ್ಲವನ್ನು ಕ್ಯಾನ್ಸಲ್ ಮಾಡಿ, ಈಗ ಬೇರೆ ಬೇರೆ ದೇವಸ್ಥಾನಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಕೆಲವು ದೇವಸ್ಥಾನಗಳ ಅಭಿವೃದ್ಧಿ ಕೆಲಸ ನಡೆದಿದ್ದರೂ ಅದನ್ನು ಕ್ಯಾನ್ಸಲ್ ಮಾಡಿದ್ದಾರೆ. ಈಗ ಕೆಲಸ ಮಾಡಿದವರಿಗೆ ಹಣ ಯಾರು ಕೊಡಬೇಕು ಎಂದು ಪ್ರಶ್ನಿಸಿದರು.

ಹಿಂದೆ ತಾವು ಸಚಿವರಾಗಿದ್ದಾಗ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದಾಗ ಕೆರೂರ ಏತ ನೀರಾವರಿ ಮಂಜೂರು ಮಾಡಿಸಿದ್ದೆ. ಬೀಳಗಿ ಕ್ಷೇತ್ರದ ಶೇ.೮೦ ಬಾದಾಮಿ ತಾಲೂಕಿನ ಶೇ.೨೦ ಪ್ರದೇಶ ನೀರಾವರಿ ಆಗುತ್ತಿತ್ತು. ಆದರೆ, ಅಂದು ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಭೂಮಿ ಪೂಜೆ ಮಾಡಿಸಿ ಎಂದಿದ್ದಕ್ಕೆ ನಾನು ಒಪ್ಪಿದ್ದೆ. ೪೩೧ ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಎರಡು ವರ್ಷದಿಂದ ಮುಂದುವರೆದಿಲ್ಲ. ಶೇ. ೩೦ ರಷ್ಟು ಹಣ ಖರ್ಚು ಮಾಡಿಲ್ಲ. ಕ್ಷೇತ್ರದಲ್ಲಿ ತಾವು ಮಂಜೂರು ಮಾಡಿಸಿದ್ದ ಕಾಡರಕೊಪ್ಪ, ಅನವಾಲ ಏತ ನೀರಾವರಿ ಯೋಜನೆಗಳು ಮುಕ್ತಾಯಗೊಂಡಿಲ್ಲ ಎಂದು ಆರೋಪಿಸಿದರು.

ಹಾಗೆಯೇ ಯುಕೆಪಿಗೆ ಮುಳುಗಡೆ ಆಗುವ ೨೨ ಗ್ರಾಮಗಳ ಸ್ಥಳಾಂತರಕ್ಕೆ ಜಮೀನು ಕಳೆದುಕೊಳ್ಳುವ ರೈತರಿಗೆಂದೆ ಬೊಮ್ಮಾಯಿ ಅವರು, ಕಾರಜೋಳ ಅವರು ಸೇರಿ ೫ ಸಾವಿರ ಕೋಟಿ ರೂ. ಇಟ್ಟಿದ್ದರು. ಆದರೆ, ಅದನ್ನು ಕಾಂಗ್ರೆಸ್ ಸರ್ಕಾರ ಬಳಕೆ ಮಾಡದೇ ಬೇರೆ ಬೇರೆ ಕೆಲಸಗಳಿಗೆ ಖರ್ಚು ಮಾಡಿದೆ. ಈಗ ಬರುವ ಬಜೆಟ್‌ನಲ್ಲಿ ಆ ೫ ಸಾವಿರ ಕೋಟಿ ರೂ. ಜೊತೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡುವಂತೆ ಎರಡ್ಮೂರು ದಿನಗಳಲ್ಲಿ ಸಿಎಂ ಹಾಗೂ ಡಿಸಿಎಂ ಅವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುತ್ತೇವೆ. ಅಲ್ಲಿ ನಮಗೆ ಸ್ಪಂದನೆ ಸಿಗದೇ ಇದ್ದರೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net