ತೆರಿಗೆ ಬರ, ಅಭಿವೃದ್ಧಿಗೆ ಗರ!

Palike
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಸ್ಥಳೀಯ ಮಟ್ಟದ ಸಂಪನ್ಮೂಲಗಳಿಂದಲೇ ನಡೆಯಬೇಕಿರುವ ಮಹಾನಗರ ಪಾಲಿಕೆಗೆ ವಿವಿಧ ತೆರಿಗೆಗಳ ಆದಾಯವೇ ಮೂಲ. ಆದರೆ, ಆರ್ಥಿಕ ಬಲಾಢ್ಯರು, ವಾಣಿಜ್ಯ ಆಸ್ತಿಗಳ ಮಾಲೀಕರು ಸೇರಿ ಇತರರು ತೆರಿಗೆ ಕಟ್ಟದಿರುವ ಪರಿಣಾಮ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ನಾಲ್ಕೈದು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ‘ ಆಸ್ತಿ ತೆರಿಗೆ’ ವಸೂಲಿ ಆಗದೆ ಪಾಲಿಕೆ ಪರದಾಡುತ್ತಿದೆ. ಪ್ರತಿ ವರ್ಷ ತನ್ನ 1.55 ಲಕ್ಷ ಆಸ್ತಿಗಳಿಂದ ಸರಾಸರಿ 70 ಕೋಟಿ ರೂ. ತೆರಿಗೆ ವಸೂಲಿ ಗುರಿ ಹಾಕಿಕೊಳ್ಳುತ್ತಿದೆ. ಆದರೆ, 50 ರಿಂದ 55 ಕೋಟಿ ರೂ. ವರೆಗೆ ಮಾತ್ರ ತೆರಿಗೆ ವಸೂಲಿ ಆಗುತ್ತಿದೆ. ವಾರ್ಷಿಕ 15 ಕೋಟಿ ರೂ. ವರೆಗೆ ತೆರಿಗೆ ಬಾಕಿ ಉಳಿಯುತ್ತಿದೆ.

2020ರಿಂದ ವಾಣಿಜ್ಯ ಮಳಿಗೆಗಳ, ಬಹುಮಹಡಿ ಕಟ್ಟಡಗಳ ಮಾಲೀಕರು, ಆರ್ಥಿಕ ಬಲಾಢ್ಯರ ಆಸ್ತಿ ತೆರಿಗೆ ಬಾಕಿ ಉಳಿದುಕೊಂಡಿದೆ. ಇದರಿಂದಾಗಿ ಪಾಲಿಕೆಯ ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಉಂಟು ಮಾಡಿದೆ. 2020 ರಿಂದ 2024 ಅವಧಿಯಲ್ಲಿ ಒಟ್ಟು 20 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಉಳಿದುಕೊಂಡಿದೆ.

ತೆರಿಗೆ ಪಾವತಿಸಲು ಆನ್‌ಲೈನ್ ಸೌಲಭ್ಯ ಹಾಗೂ ಶೇ.5 ರಿಯಾಯಿತಿ ನೀಡಿದರೂ ಜನರು ತೆರಿಗೆ ಕಟ್ಟುತ್ತಿಲ್ಲ. ಪ್ರತಿಷ್ಠಿತ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಹಾಗೂ ಬೃಹತ್ ಉದ್ಯಮಿಗಳು ವಾರ್ಷಿಕ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿವೆ. ಆದರೆ, ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿವೆ. ತೆರಿಗೆ ಪಾವತಿಸುವಂತೆ ನಿರಂತರ ನೋಟಿಸ್ ನೀಡಿದರೂ ಸ್ಪಂದಿಸುತ್ತಿಲ್ಲ.

ಪ್ರತಿ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹವಾಗದ ಕಾರಣ, ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು, ಚರಂಡಿಗಳು, ಉದ್ಯಾನಗಳ ನಿರ್ವಹಣೆ ಕಷ್ಟವಾಗುತ್ತಿದೆ. ದಿನಬೆಳಗಾದರೆ ನಗರದ ಶುಚಿತ್ವ, ಸೌಂದರ್ಯೀಕರಣಕ್ಕೆ ಟೊಂಕಕಟ್ಟಿ ದುಡಿಯುವ ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಕೊಡಲು ಪಾಲಿಕೆ ಪರದಾಡುತ್ತಿದೆ. 2022-2024 ಅವಧಿಯಲ್ಲಿ ಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಒಂದೂ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳದಿರುವುದು ದುರಂತವಲ್ಲದೆ ಬೇರೇನೂ ಅಲ್ಲ.

ಕಳೆದೆರಡು ವರ್ಷಗಳಿಂದ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸಿದ್ದು ನಿಜ. ಆದರೆ, ಪ್ರತಿ ವರ್ಷ ವಾಹನಗಳ ಬಾಡಿಗೆ, ವಿದ್ಯುತ್ ಬಿಲ್, ಆಸ್ತಿಗಳ ನಿರ್ವಹಣೆ, ಸಾಮಗ್ರಿ ವೆಚ್ಚ, ಹೊರಗುತ್ತಿಗೆ ನೌಕರರು, ಕಾರ್ಮಿಕರ ವೇತನ ಇತ್ಯಾದಿಗಳು ಸಹಜವಾಗಿಯೇ ಹೆಚ್ಚುತ್ತವೆ. ಹೀಗಾಗಿ ವರಮಾನ ಸಂಗ್ರಹದಲ್ಲಿ ಶೇ.15ರಿಂದ ಶೇ.22 ರಷ್ಟು ಹೆಚ್ಚಳ ಹಣದುಬ್ಬರ ಏರಿಳಿತಕ್ಕೆ ಹೊಂದಿಕೆಯಾಗುತ್ತದೆ ಎಂದು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.


ಅಕ್ರಮ ಬಡಾವಣೆಗಳೇ ಹೊರೆ?

ಮಹಾನಗರ ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸ ಆದಾಯ ಮೂಲಗಳು ಅಗತ್ಯ. ಆದರೆ, ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಡಾವಣೆಗಳೇ ಎದ್ದು ನಿಲ್ಲುತ್ತಿವೆ. ಎನ್‌ಎ ಆಗಿಲ್ಲದೆ, ಲೇಔಟ್‌ಗೆ ಅನುಮೋದನೆ ಪಡೆಯದೆ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಕೆಲಸವಾಗಿಲ್ಲ. ವರ್ಷದಿಂದ ವರ್ಷಕ್ಕೆ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ ಆಗುತ್ತಿದೆ. ಆದರೆ, ಪಾಲಿಕೆಯ ಆಸ್ತಿಗಳ ಸಂಖ್ಯೆ 1.55 ಲಕ್ಷ ದಾಟುತ್ತಿಲ್ಲ. ಪಾಲಿಕೆಯ ಅರ್ಧದಷ್ಟು ಆದಾಯ ಅನಧಿಕೃತ ಬಡಾವಣೆಗಳ ಅಭಿವೃದ್ಧಿಗೆ ವ್ಯಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪಾಲಿಕೆಯ ತೆರಿಗೆ ಸಂಗ್ರಹ ಗುರಿ
ವರ್ಷ ಗುರಿ ಸಾಧನೆ ( ಕೋಟಿ ರೂ.)

2020-21 45 37
2021-22 50 45
2022-23 55 41
2023-24 62 57
2024-27 72 20 ( ಮೇ)
………………..

ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ತಂತ್ರಾಂಶದಲ್ಲಿನ ಸಮಸ್ಯೆ ಪರಿಹರಿಸಿ ಎಲ್ಲ ಆಸ್ತಿಗಳನ್ನು ಆನ್‌ಲೈನ್ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಹುಮಹಡಿ ಕಟ್ಟಡಗಳಲ್ಲಿನ ಮನೆಗಳಿಂದ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಮೇ ಅಂತ್ಯದ ವರೆಗೆ ತೆರಿಗೆ ರಿಯಾಯಿತಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.| ಪಿ.ಎನ್.ಲೋಕೇಶ, ಮಹಾನಗತ ಪಾಲಿಕೆ ಆಯುಕ್ತ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net