

ಅರಸೀಕೆರೆ: ತೆಂಗು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಕೊಬ್ಬರಿ ಹಾಗೂ ತೆಂಗಿನಕಾಯಿ ಬೆಲೆ ಕುಸಿತದಿಂದ ಅನ್ನದಾತ ಹೈರಾಣಾಗಿದ್ದಾನೆ. ಬೆಂಬಲ ಬೆಲೆ ಹೆಚ್ಚಳ ಕುರಿತು ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗೊತ್ತಿ ಹೋರಾಟಕ್ಕಿಳಿಯಲು ನಿರ್ಧರಿಸಲಾಗಿದೆ. ಅ.2ರಂದು ತಿಪಟೂರಿನಲ್ಲಿ ಗಾಂಧಿ ಜಯಂತಿಯಂದು ಬೆಂಗಳೂರು ಚಲೋ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ತಾಲೂಕು ಮುಖಂಡ ಈರಾಪುರ ಮಧುಸೂದನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಯಿ, ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದೆ. ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ತಿಪಟೂರು, ತುಮಕೂರು ಸೇರಿ ಎಲ್ಲೆಡೆ ಹೋರಾಟ ಮಾಡಿದ್ದು, ಬಂದ್‌ಗೆ ಕರೆಯನ್ನೂ ನೀಡಲಾಗಿತ್ತು. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ 11,750 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರ 1,250 ರೂ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರೂ. ನೀಡುವ ಜತೆಗೆ ಎಪಿಎಂಸಿ ಖರೀದಿ ಕೆಂದ್ರಗಳಲ್ಲಿ ಶಾಶ್ವತ ನಫೆಡ್ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನವೀನ್, ರೈತ ಮುಖಂಡರಾದ ಕೆ.ವೇಣುಗೋಪಾಲ್, ಗೋವಿಂದರಾಜ್, ಪೊಣ್ಣಚ್ಚ, ಯತಿರಾಜ್, ನಿರಗುಂದ ಲೋಕೇಶ್, ನಟರಾಜ್, ಶಿವಮೂರ್ತಿ, ಹಬ್ಬನಘಟ್ಟ ನವೀನ್, ಗಣೇಶ್ ಸೇರಿ ವಿವಿಧ ಜಿಲ್ಲೆ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.