ತೂಗು ಸೇತುವೆಗಳಿಗೆ ತುಕ್ಕು

26sirsi1b- pandavara hole setuve
Published on

ಶಿರಸಿ: ಇಲ್ಲಿನ ಶಾಲ್ಮಲಾ ನದಿಯ ಪಾಂಡವರಹೊಳೆ ಹಾಗೂ ಸಹಸ್ರಲಿಂಗ ಭಾಗದಲ್ಲಿ ನಿರ್ವಿುಸಿರುವ ಎರಡು ತೂಗು ಸೇತುವೆಗಳು ನಿರ್ವಹಣೆ ಕೊರತೆಯಿಂದ ತುಕ್ಕು ಹಿಡಿದಿವೆ.

ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಸ್ರಲಿಂಗದಲ್ಲಿ ತಜ್ಞ ಗಿರೀಶ ಭಾರದ್ವಾಜ ಅವರ ನೇತೃತ್ವದಲ್ಲಿ ದಶಕದ ಹಿಂದೆ ತೂಗು ಸೇತುವೆ ನಿರ್ವಿುಸಲಾಗಿದೆ. ಸೇತುವೆ ನಿರ್ವಣಕ್ಕೆ ಪ್ರವಾಸೋದ್ಯಮ ಇಲಾಖೆ 22 ಲಕ್ಷ ರೂಪಾಯಿ ಅನುದಾನ ನೀಡಿತ್ತು. ಸೇತುವೆ ನಿರ್ವಣದಿಂದ ಹುಳಗೋಳ, ಭೈರುಂಬೆ ಸಂಪರ್ಕದ ಜತೆ ಹುಲೇಕಲ್, ಹೊಸ್ತೋಟ ಸೇರಿ ಸುತ್ತಮುತ್ತಲ ಇತರ ಹಳ್ಳಿಗಳಿಗೆ ಸಂಪರ್ಕಕ್ಕೆ ಸಹಕಾರಿಯಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ನೂರು ವರ್ಷ ಸೇತುವೆಗೆ ಏನೂ ಆಗುವುದಿಲ್ಲ ಎಂದು ಭಾರದ್ವಾಜ ಆಗ ಹೇಳಿದ್ದರು. ಆದರೆ, ವಾರ್ಷಿಕ ನಿರ್ವಹಣೆ ಇರಲಿ, ಪಂಚ ವಾರ್ಷಿಕ ನಿರ್ವಹಣೆ ಕೂಡ ಮಾಡಲಾಗಿಲ್ಲ. ಇದರಿಂದ ಸೇತುವೆಯ ಕಬ್ಬಿಣದ ಸರಳುಗಳು, ನಟ್, ಬೋಲ್ಟ್, ಜಾಯಿಂಟ್​ಗಳಿಗೆ ಸಂಪೂರ್ಣ ತುಕ್ಕು ಹಿಡಿದಿದೆ. ಕೆಲವೆಡೆ ಶಿಥಿಲಗೊಂಡಿದೆ.

ನಿರ್ವಹಣೆಗೆ ನಿರ್ಲಕ್ಷ್ಯ: ಸಹಸ್ರಲಿಂಗಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ನಿತ್ಯ ಬರುತ್ತಾರೆ. ವಾಹನ ನಿಲುಗಡೆ ಹಾಗೂ ಸ್ಥಳೀಯ ವ್ಯವಸ್ಥೆಗಳ ನಿರ್ವಹಣೆಗಾಗಿ ಪಂಚಾಯಿತಿಯು ಖಾಸಗಿ ಗುತ್ತಿಗೆ ಮೂಲಕ ವಾರ್ಷಿಕ ಅಂದಾಜು 2 ಲಕ್ಷ ರೂಪಾಯಿ ಸಂಗ್ರಹಿಸುತ್ತದೆ. ಆದರೆ, ಸ್ಥಳದಲ್ಲಿ ಮೂಲಸೌಲಭ್ಯಗಳಾದ ಶೌಚಗೃಹ, ಸ್ನಾನಗೃಹ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಜತೆಗೆ ತೂಗು ಸೇತುವೆಯ ನಿರ್ವಹಣೆ ಮರೆತಿದೆ. ಇದರಿಂದಾಗಿ ಸೇತುವೆ ಅಪಾಯದಂಚಿಗೆ ತಲುಪಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಶಾಲ್ಮಲಾ ನದಿ ನೋಡಲು ಸಾಕಷ್ಟು ಜನ ಸೇತುವೆ ಮೇಲೆ ತೆರಳುತ್ತಾರೆ. ಆದರೆ ಇಷ್ಟೊಂದು ಜನರನ್ನು ಹೊರುವ ಸೇತುವೆಗೆ ಪಂಚಾಯಿತಿ ವತಿಯಿಂದ ಬಣ್ಣ ಬಳಿಯುವ, ನಿರ್ವಹಿಸುವ ಕಾರ್ಯ ಆಗಿಲ್ಲ. ಸೇತುವೆಯ ಎರಡೂ ಪಕ್ಕದ ಜತೆ ಕೆಳ ಭಾಗ ಸಂಪೂರ್ಣ ತುಕ್ಕಿನಿಂದ ಕೂಡಿದ್ದು, ಇದರ ಮೇಲೆ ಸಂಚಾರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ತಕ್ಷಣ ಸ್ಥಳೀಯ ಆಡಳಿತ ಎಚ್ಚೆತ್ತು ಸೇತುವೆ ನಿರ್ವಹಣೆ ಮಾಡಬೇಕು. | ಗಣಪತಿ ಚೌಧರಿ ಪ್ರವಾಸಿಗ

ಸಹಸ್ರಲಿಂಗದಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹ ನಿರ್ವಿುಸಲು 13 ಲಕ್ಷ ರೂಪಾಯಿಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಆದರೆ, ಅದರಲ್ಲಿ ಸೇತುವೆ ನಿರ್ವಹಣೆಯ ವಿಷಯ ಸೇರ್ಪಡೆಯಾಗಿಲ್ಲ. ಪಂಚಾಯಿತಿ ನಿಧಿಯನ್ನೇ ಬಳಸಿಕೊಂಡು ಸೇತುವೆ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳುತ್ತೇವೆ. | ಜಯವೀರ ಭಟ್ಟ ಭೈರುಂಬೆ ಪಂಚಾಯಿತಿ ಕಾರ್ಯದರ್ಶಿ

ಮತ್ತೊಂದು ಸೇತುವೆ ತಾಲೂಕಿನ ಇಟಗುಳಿ ಹಾಗೂ ಹುಲೇಕಲ್ ಪಂಚಾಯಿತಿಯನ್ನು ಜೋಡಿಸುವ ಪಾಂಡವರಹೊಳೆ ತೂಗು ಸೇತುವೆಯ ಕಥೆಯೂ ಅಷ್ಟೇ. ಸೇತುವೆ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಸೇತುವೆ ನಿರ್ವಹಣೆಯು ಯಾವ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ ಎಂಬುದು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಂದಿಗೂ ತಿಳಿದಿಲ್ಲ. ನಮ್ಮ ಪಂಚಾಯಿತಿಗೆ ಸೇತುವೆ ಹಸ್ತಾಂತರಿಸಿಲ್ಲ. ಹಾಗಾಗಿ ನಿರ್ವಹಣೆ ಕೂಡ ಮಾಡಿಲ್ಲ ಎಂಬುದು ಅವರ ವಾದವಾಗಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net