ತುರ್ತು ಪರಿಹಾರಕ್ಕೆ ಕ್ರಮ ವಹಿಸಿ

bkt-29-2
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿಯಿಂದ ಮನೆ, ಬೆಳೆ, ರಸ್ತೆ ಸೇರಿದಂತೆ ಇತರೆ ಹಾನಿಯ ಬಗ್ಗೆ ತುರ್ತಾಗಿ ಸಮೀಕ್ಷೆ ಕೈಗೊಂಡು ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಅತಿವೃಷ್ಠಿಯಿಂದ ಉಂಟಾದ ಹಾನಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಹಾನಿ ಸಂಭವಿಸುತ್ತಿದೆ. ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಹೆಚ್ಚಾಗಿ ಮಳೆ ಸುರಿದು ಸಮಸ್ಯೆಯಾಗಿದೆ. ಇನ್ನು ನಾಲ್ಕೈದು ದಿನಗಳ ಕಾಲ ಮಳೆ ಆಗುವ ಸಂಭವವಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಹಾನಿಯ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಅತಿವೃಷ್ಠಿಯಿಂದಾಗಿ ಉಂಟಾದ ಹಾನಿಯ ಬಗ್ಗೆ ತಹಸೀಲ್ದಾರರಲ್ಲಿ ಮಾಹಿತಿ ಇಲ್ಲದಿರುವ ಕುರಿತು ಅಸಮಾದಾನ ವ್ಯಕ್ತಪಡಿಸಿದರು. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆಯಾ ತಾಲೂಕಾ ವ್ಯಾಪ್ತಿಯಲ್ಲಿ ಬೆಳೆ, ಮನೆ, ರಸ್ತೆ, ವಿದ್ಯುತ್ ಗೆ ಸಂಬಂಧಿಸಿದಂತೆ ಹಾನಿಯ ಮಾಹಿತಿ ಪಡೆದು ವಿವಿಧ ಇಲಾಖೆಗಳ ಸಹಾರದೊಂದಿಗೆ ತುರ್ತಾಗಿ ಸಮೀಕ್ಷೆ ನಡೆಸುವದರ ಜೊತೆಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಪರಿಶೀಲಿಸುವ ಕೆಲಸವಾಗಬೇಕು. ಅನುಮತಿ ಪಡೆಯದೇ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲವೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿವಿಧ ಜಲಾಶಯಗಳ ಹೊರ ಹರಿವಿನ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಡೆದುಕೊಂಡರು. ಆಲಮಟ್ಟಿ ಜಲಾಶಯದ ಹೊರ ಹರಿವು 25000 ಕ್ಯೂಸೆಕ್ಸ್ ಇದ್ದರೆ, ಹಿಪ್ಪರಗಿ 26 ಸಾವಿರ ಕ್ಯೂಸೆಕ್ಸ್, ಹಿಡಕಲ್ 3810 ಕ್ಯೂಸೆಕ್ಸ್, ನವೀಲುತೀರ್ಥ 894 ಕ್ಯೂಸೆಕ್ಸ್ ಇದ್ದು, ಜಿಲ್ಲೆಯಲ್ಲಿರುವ ಕೃಷ್ಣಾ ನದಿಯಿಂದ 56, ಘಟಪ್ರಭಾ ನದಿಯಿಂದ 69 ಹಾಗೂ ಮಲಪ್ರಭಾ ನದಿಯಿಂದ 63 ಸೇರಿ ಒಟ್ಟು 188 ಗ್ರಾಮಗಳು ಹಾನಿಗೊಳಗಾಗಿರುವುದಾಗಿ ಸಭೆಗೆ ತಿಳಿಸಲಾಯಿತು.
ಮುಂಗಾರು ಅವಯಲ್ಲಿ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಒಂದು ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, 14 ಕುಟುಂಬಗಳ 60 ಜನ ಆಶ್ರಯ ಪಡೆದಿದ್ದರು. ಓರ್ವ ವ್ಯಕ್ತಿ ಮೃತಪಟ್ಟಿದ್ದು, 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಒಟ್ಟು 67 ವಿವಿಧ ತರಹದ ಜಾನುವಾರುಗಳು ಹಾನಿಗೀಡಾಗಿದ್ದು, 3.49 ಲಕ್ಷ ರೂಗಳ ಪರಿಹಾರ ವಿತರಿಸಲಾಗಿದೆ. ಕೃಷಿ 24389 ಹೆಕ್ಟೇರ್, ತೋಟಗಾರಿಕೆ 33 ಹೆಕ್ಟೇರ್ ಸೇರಿ ಒಟ್ಟು 24422 ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದ್ದು, ಪರಿಹಾರಕ್ಕೆ ಕ್ರಮವಹಿಸುವಂತೆ ಕಳಸದ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ, ಉಪ ವಿಭಾಗಾಕಾರಿಗಳಾದ ಶ್ವೇತಾ ಬೀಡಿಕರ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net