

ಶಿರಸಿ: ಇಲ್ಲಿನ ಮಾರಿಕಾಂಬಾ ಜಾತ್ರೆಗೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದ ವ್ಯಾಪಾರಿಗಳ ಬದುಕನ್ನು ‘ಕರೊನಾ’ ಮೂರಾಬಟ್ಟೆಯಾಗಿಸಿದೆ. ಹಾಕಿದ ಬಂಡವಾಳ ತೆಗೆಯಲು ಒದ್ದಾಡುತ್ತಿರುವಾಗಲೇ ಅಂಗಡಿಗಳ ತೆರವು ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಸಕ್ತ ವರ್ಷ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾಕಷ್ಟು ವ್ಯಾಪಾರಿಗಳು ಆಗಮಿಸಿದ್ದರು. ಸ್ಥಳೀಯವಾಗಿ 200 ವ್ಯಾಪಾರಿಗಳ ಜತೆ ರಾಜಸ್ತಾನ, ಗುಜರಾತ್ ಮೂಲದ 75ಕ್ಕೂ ಹೆಚ್ಚು ಸಣ್ಣ, ಮಧ್ಯಮ ಸ್ಥರದ ವ್ಯಾಪಾರಿಗಳು ಜಾತ್ರೆ ಅಂಗಳದಲ್ಲಿ ಹಂಗಾಮಿ ಅಂಗಡಿ ಪಡೆದು ವ್ಯಾಪಾರದಲ್ಲಿ ತೊಡಗಿದ್ದರು. ಆದರೆ, 9 ದಿನಗಳ ಜಾತ್ರೆಯಲ್ಲಿ ಸರಿಯಾಗಿ ವ್ಯಾಪಾರವಾಗಿದ್ದು ಶನಿವಾರ ಮತ್ತು ಭಾನುವಾರ ಮಾತ್ರ. ಉಳಿದಂತೆ ಜನರು ಜಾತ್ರೆಯೆಡೆ ಮುಖಮಾಡುವ ದಿನಗಳಲ್ಲಿ ಕರೊನಾ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ ರೂಪಾಯಿ ನೀಡಿ ಅಂಗಡಿ ಹಾಕಿದವರು ಕಂಗಾಲಾಗಿದ್ದಾರೆ.
ಶೇಕಡಾ 60ರಷ್ಟು ನಷ್ಟ: ರಾಜಸ್ತಾನ, ಗುಜರಾತ್ ಮೂಲದ 75ಕ್ಕೂ ಹೆಚ್ಚಿನ ವ್ಯಾಪಾರಿಗಳು 50ರಷ್ಟು ಮಳಿಗೆಗಳನ್ನು ಬಾಡಿಗೆ ಪಡೆದಿದ್ದರು. ಬಟ್ಟೆ, ತಿಂಡಿ, ವಾಚ್, ಕನ್ನಡಕ, ಬಳೆ-ಸರ, ಪ್ಲಾಸ್ಟಿಕ್, ಪಾತ್ರೆ ಸೇರಿ ವಿವಿಧ ವಸ್ತುಗಳ ಈ ಅಂಗಡಿಗಳಿಗೆ 40 ಲಕ್ಷ ರೂಪಾಯಿಗೂ ಅಧಿಕ ಬಾಡಿಗೆ ಮೊತ್ತ ಭರಿಸಿದ್ದರು. ಆದರೆ, 9 ದಿನಗಳ ಜಾತ್ರೆಯುದ್ದಕ್ಕೂ ಶೇ.40ರಷ್ಟು ವ್ಯಾಪಾರ ಇವರಿಗೆ ಆಗಿರಲಿಲ್ಲ. ಇದೀಗ ಕರೊನಾ ಭೀತಿಯಿಂದ ಜಾತ್ರೆ ಅಂಗಳದಲ್ಲಿನ ತಾತ್ಕಾಲಿಕ ಮಳಿಗೆಗಳ ತೆರವು ಮಾಡಲಾಗಿದೆ. ಹೀಗಾಗಿ ಈ ವ್ಯಾಪಾರಿಗಳ ಜತೆ ಸ್ಥಳೀಯವಾಗಿ ಅಮ್ಯೂಸ್ವೆುಂಟ್ಗಳು, ಇತರ ಅಂಗಡಿ ಬಾಡಿಗೆ ಪಡೆದಿದ್ದ 200ಕ್ಕೂ ಹೆಚ್ಚು ವ್ಯಾಪಾರಿಗಳು ಮುಂದೇನು ಮಾಡಬೇಕೆಂದು ತಿಳಿಯದೆ ಮಂಕಾಗಿದ್ದಾರೆ.ಸರ್ಕಾರದ ನಿರ್ದೆಶನದಂತೆ ಜಿಲ್ಲಾಧಿಕಾರಿ ಆದೇಶದಂತೆ ನಗರಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಅಂಗಡಿಗಳ ತೆರವು ಮಾಡಿಸಿದೆ. ಇದರ ಜತೆ ನಾಟಕ ಕಂಪನಿಗಳು ಕೂಡ ಟೆಂಟ್ ಕೀಳಬೇಕಾದ ಅನಿವಾರ್ಯತೆ ಎದುರಾಗಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬಂದು ಲಾಭ ಮಾಡಿಕೊಳ್ಳುತ್ತಿದ್ದೆವು. ಆದರೆ, ಈ ಬಾರಿ ಹೆಚ್ಚಿನ ವ್ಯಾಪಾರವಿಲ್ಲ. ಕರೊನಾ ಹೆದರಿಕೆಯಿಂದ ಅವಧಿಗಿಂತ ಮುಂಚಿತವಾಗಿ ಜಾಗ ಖಾಲಿ ಮಾಡಿಸಲಾಗಿದೆ. ಬಟ್ಟೆ ಅಂಗಡಿ ಹಾಕಿ ಕೈಸುಟ್ಟುಕೊಂಡಂತಾಗಿದೆ. ಮಾಲನ್ನು ವಾಪಸ್ ಕೊಂಡೊಯ್ಯಲು ಬಾಡಿಗೆ ದರ ನಿಭಾಯಿಸುವುದು ಕಷ್ಟ. ಹಾಗಾಗಿ ಕೇಳಿದ ದರಕ್ಕೆ ಬಟ್ಟೆ ನೀಡಿದ್ದೇವೆ. ಅತ್ತ ಲಾಭವೂ ಇಲ್ಲ, ಇತ್ತ ನಿಗದಿತ ಒಪ್ಪಂದದಂತೆ ಜಾಗವೂ ಇಲ್ಲದಂತಾಗಿದೆ. | ನರಪತ್ ಕರ್ವಾ ರಾಜಸ್ಥಾನಿ ಬಟ್ಟೆ ವ್ಯಾಪಾರಿ
ಹವಗಿ ಗ್ರಾಮದಲ್ಲಿ ಜನಜಾಗೃತಿ
ಹಳಿಯಾಳ: ತಾಲೂಕು ಆರೋಗ್ಯ ಇಲಾಖೆ, ಹವಗಿ ಗ್ರಾ.ಪಂ., ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಶುಕ್ರವಾರ ತಾಲೂಕಿನ ಹವಗಿ ಗ್ರಾಮದಲ್ಲಿ ಕರೊನಾ ಕುರಿತು ಜನಜಾಗೃತಿ ಮೂಡಿಸಿದರು. ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ಭೇಟಿ ನೀಡಿ ಕರೊನಾ ವೈರಸ್ನ ಪರಿಣಾಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಗ ಹರಡುವಿಕೆ ಹಾಗೂ ತಡೆಗಟ್ಟುವಿಕೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅರುಣ ಕಾಖಂಡಕಿ, ಪೊ›. ವಿ.ಎಂ. ಚೌಗುಲಾ, ಹವಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆನ್ನೂರಮಠ, ಹವಗಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಹವಗಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರು ಭಾಗವಹಿಸಿದ್ದರು.
ಮುನ್ನೆಚ್ಚರಿಕೆ ವಹಿಸುವುದು ಮುಖ್ಯ
ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿ ಶನಿವಾರ ವಿಧಾನಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೊನಾ ಜಾಗೃತಿ ಸಭೆ ಜರುಗಿತು. ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾಹಿತಿ ನೀಡಿ, ಕರೊನಾಗೆ ನಿರ್ದಿಷ್ಟ ಔಷಧವಿಲ್ಲದ ಕಾರಣ ಮುನ್ನೆಚ್ಚರಿಕೆ ಕ್ರಮ ಅಗತ್ಯ ಎಂದರು. ವಿದೇಶದಿಂದ ಜಿಲ್ಲೆಗೆ ಬಂದ 13 ಜನರ ಮೇಲೆ ನಿಗಾ ವಹಿಸಲಾಗಿದೆ. ಅವರಿಗೆ ಮುನ್ನೆಚ್ಚರಿಕೆ ಕ್ರಮವನ್ನು ಸೂಚಿಸಲಾಗಿದೆ. ಶಂಕಿತರಿಗೆ ವಿತರಿಸಲು ಬೇಕಾದ ಮಾಸ್ಕ್ ಹಾಗೂ ಇತರ ಸೌಲಭ್ಯಗಳು ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಪೂರೈಸಲಾಗಿದೆ ಎಂದರು. ಆರೋಗ್ಯ ಇಲಾಖೆಯ ಯಾವುದೇ ಸಿಬ್ಬಂದಿಗೂ ರಜೆ ನೀಡದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಐಎಂಎ ಶಿರಸಿ ಘಟಕದ ಕಾರ್ಯದರ್ಶಿ ತನುಶ್ರೀ ಹೆಗಡೆ ಮಾತನಾಡಿ, ಐಎಂಎ ವತಿಯಿಂದ ಕರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರ ಹಂಚಲಾಗುತ್ತಿದೆ. ಸರ್ಕಾರದ ಜತೆ ಸಂಪರ್ಕ ಸಾಧಿಸಿ ಈ ರೋಗದ ಹತೋಟಿಗೆ ವೈದ್ಯರು ಸಹಕಾರ ನೀಡಲಿದ್ದಾರೆ ಎಂದರು.
ಆಯುರ್ವೆದ ವೈದ್ಯ ರವಿಕಿರಣ ಪಟವರ್ಧನ ಮಾತನಾಡಿ, ಕರೊನಾ ಗುಣಮುಖಗೊಳಿಸಲು ಅಧಿಕೃತವಾದ ಔಷಧ ಆಯುರ್ವೆದದಲ್ಲಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ದೊಡ್ಮನಿ, ಜಿ.ಎನ್. ಹೆಗಡೆ, ಉಷಾ ಹೆಗಡೆ, ಪ್ರಭಾವತಿ ಗೌಡ, ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಇತರರಿದ್ದರು.
ಹೋಟೆಲ್ ಮಾಲೀಕರ ಸಂಘದ ಪ್ರಮುಖರು, ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕದ ಪದಾಧಿಕಾರಿಗಳು, ನಾಟಕ ಕಂಪನಿ ಮಾಲೀಕರು, ವೈದ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.
ಈಗಾಗಲೇ ಕರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಕ್ರಮವಹಿಸಲಾಗಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ತಪಾಸಣೆಗೆ ಬೇಕಾದ ಸೌಲಭ್ಯ ನೀಡಲಾಗಿದೆ. ವಿದೇಶದಿಂದ ಬರುವವರ ಪತ್ತೆಗೆ ಶಾಲೆಗೆ ಬರುವ ಮಕ್ಕಳಿಂದ ಮಾಹಿತಿ ಪಡೆಯಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಂದ ವರದಿ ಸಂಗ್ರಹಿಸಲಾಗುತ್ತಿದೆ.| ಡಾ.ಈಶ್ವರ ಉಳ್ಳಾಗಡ್ಡಿ ಉಪವಿಭಾಗಾಧಿಕಾರಿ