

ರಾಣೆಬೆನ್ನೂರ: ಉಪ ಚುನಾವಣೆ ಬಳಿಕ ರಾಣೆಬೆನ್ನೂರಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಬಾರಿಯ ಬಜೆಟ್ನಲ್ಲಿ ತುಂಗಭದ್ರಾ ನದಿಯಿಂದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನೂ ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯ ಸಿದ್ಧಾರೂಢ ನಗರದಲ್ಲಿ ನೂತನವಾಗಿ ನಿರ್ವಿುಸಿದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಹಾಗೂ ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಸುಧಾರಣೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ಕಂಡ ಯುವ ಪುರುಷ. ಸಾಮಾಜಿಕ ಪಿಡುಗು, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆದರೆ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಪಕ್ಷದವರೇ ಅವರನ್ನು ಸಂಸತ್ಗೆ ಸೇರಿಸಿಕೊಳ್ಳಲಿಲ್ಲ. ಇದು ವಿಪರ್ಯಾಸದ ಸಂಗತಿ. ಆದ್ದರಿಂದ ಎಸ್ಸಿ, ಎಸ್ಟಿ ಸಮಾಜದ ಪ್ರತಿಯೊಬ್ಬರೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಉತ್ತಮ ಸಾಧನೆ ಮಾಡಬೇಕು. ಅಂಬೇಡ್ಕರ್ ಭವನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಈ ಭಾಗದಲ್ಲಿ ತುಂಗಭದ್ರಾ ನದಿ ಹರಿದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಆದ್ದರಿಂದ ಕ್ಷೇತ್ರದ 50 ಸಾವಿರ ಹೆಕ್ಟೇರ್ ಪ್ರದೇಶವನ್ನು ಹನಿ ನೀರಾವರಿ ಮಾಡಿಕೊಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ. ಆದಷ್ಟು ಬೇಗ ಈ ಬೇಡಿಕೆ ಈಡೇರಲಿದೆ ಎಂದರು.
ಸಮಾರಂಭಕ್ಕೂ ಮುನ್ನ ಸಚಿವ ಬಸವರಾಜ ಬೊಮ್ಮಾಯಿ, ಹರಳಯ್ಯ ನಗರದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದರು. ಕುಂಬಾರ ಓಣಿಯಲ್ಲಿ ಗಟಾರು ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಸಂಸದ ಶಿವಕುಮಾರ ಉದಾಸಿ, ಜಿಪಂ ಸದಸ್ಯರಾದ ಏಕನಾಥ ಭಾನುವಳ್ಳಿ, ಮಂಗಳಗೌರಿ ಪೂಜಾರ, ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಪ್ರಭಾವತಿ ತಿಳವಳ್ಳಿ, ತಹಸೀಲ್ದಾರ್ ಬಸವನಗೌಡ ಕೋಟೂರು, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ಪ್ರಮುಖರಾದ ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ ಇತರರು ಉಪಸ್ಥಿತರಿದ್ದರು.
ಕೃಷಿ ಭೂಮಿಗೆ ನೀರಾವರಿ ಒದಗಿಸುವುದು. ಗ್ರಾಮೀಣ ಭಾಗದ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದು ಸೇರಿ ಹಲವಾರು ಬೇಡಿಕೆ ಈಡೇರಿಸುವಂತೆ ಶಾಸಕ ಅರುಣಕುಮಾರ ಪೂಜಾರ ಈಗಾಗಲೇ ಮುಖ್ಯಮಂತ್ರಿ ಬಿಎಸ್ವೈ ಅವರ ಬಳಿಕ ಬೇಡಿಕೆ ಇಟ್ಟಿದ್ದಾರೆ. ಅದೆಲ್ಲವೂ ಈ ಬಾರಿಯ ಬಜೆಟ್ನಲ್ಲಿ ಈಡೇರುವ ಸಾಧ್ಯತೆಯಿದೆ. | ಬಸವರಾಜ ಬೊಮ್ಮಾಯಿ, ಗೃಹ ಸಚಿವ