

ಮದ್ದೂರು: ಪಟ್ಟಣದ ತಾಲೂಕು ಕಚೇರಿ ಭ್ರಷ್ಟಾಚಾರದ ತವರೂರಾಗಿದೆ. ರೈತರು, ಸಾರ್ವಜನಿಕರು ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾದ ದುಸ್ಥಿತಿ ಬಂದಿದೆ ಎಂದು ರೈತ ಸಂಘಟನೆಯ ವಿಭಾಗೀಯ ರಾಜ್ಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಆರೋಪಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರ್ ಡಾ.ಸ್ಮಿತಾರಾಮು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರು, ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು, ಕೆಲ ಅಧಿಕಾರಿಗಳು ಲಂಚಾವತಾರದಲ್ಲಿ ಮುಳುಗಿರುವುದು ಬೇಸರದ ಸಂಗತಿ. ತಾಲೂಕು ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರೈತರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಕಚೇರಿಗಳಿಗೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಸರ್ವೇ ಮಾಡಿಸಲು, ಆರ್‌ಟಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ವರ್ಷಾನುಗಟ್ಟಲೆಯಿಂದ ಅಲೆದರೂ ರೈತರಿಗೆ ಕೆಲಸ ಆಗುತ್ತಿಲ್ಲ. ಇದರಿಂದ ರೈತರು ದೂರದ ಊರುಗಳಿಂದ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ವೇ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳು ಬಂದರೆ ಹಣ ಪಡೆದು ಕ್ಷಣಮಾತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಕೆಲಸಗಳನ್ನು ಮಾಡಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ತಾಲೂಕು ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ರೈತ ಸಂಘದಿಂದ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಬದಲಾವಣೆ ಕಂಡಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದಿದ್ದಲ್ಲಿ ರೈತ ಸಂಘದಿಂದ ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
ರೈತ ಮುಖಂಡ ಲಿಂಗಪ್ಪಾಜಿ ಮಾತನಾಡಿ, ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇಂತಿಷ್ಟು ಹಣ ನೀಡಿದರೆ ಎಲ್ಲ ದಾಖಲೆಗಳನ್ನು ನೀಡುವ ಕೆಲ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಕೇಳಿದರೆ ಯಾವುದೇ ದಾಖಲೆಗಳು ಇಲ್ಲವೆಂದು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿಗಳು ಗುರುತಿನ ಪತ್ರವನ್ನು ಹಾಕಿಕೊಳ್ಳುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಗುರುತಿನ ಚೀಟಿ ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಾಕೀತು ಮಾಡಬೇಕು ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಜಲ ಜೀವನ್ ಮೀಷನ್ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಕೆಲವೆಡೆ ಕಾಲುವೆಗಳು ಒತ್ತುವರಿಯಾಗಿದೆ. ನಾಲೆಗಳಲ್ಲಿ ಗಿಡ ಗಂಟಿಗಳು ಬೆಳೆದು ನೀರು ಸಮರ್ಪಕವಾಗಿ ಮುಂದಕ್ಕೆ ಹೋಗುತ್ತಿಲ್ಲ. ಈ ರೀತಿ ಹಲವು ಸಮಸ್ಯೆಗಳಿದ್ದು ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
------------
ಸಕಾಲಕ್ಕೆ ಜಾತಿ ಪ್ರಮಾಣ ಪತ್ರ ಕೊಡಿಸಿ
ರೈತ ಮಖಂಡ ವೀರಪ್ಪ ಮಾತನಾಡಿ, ಮುಂದಿನ ತಿಂಗಳು ಶಾಲಾ, ಕಾಲೇಜುಗಳು ಪ್ರಾರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನಿಗದಿತ ಸಮಯದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕಾಲದಲ್ಲಿ ನೀಡಬೇಕು. ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ಕರ್ತವ್ಯನಿರತ ಸ್ಥಳದಲ್ಲಿ ಹಾಜರಿದ್ದು ಯಾವುದೇ ತೊಡಕು ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.
ರೈತರ ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿ, ತಾಲೂಕು ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾನು ತಹಸೀಲ್ದಾರ್ ಆಗಿ ಕರ್ತವ್ಯವಹಿಸಿಕೊಂಡ 8 ತಿಂಗಳ ಅವಧಿಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವ ಜತೆಗೆ ಜನಸ್ನೇಹಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. 14,700 ಅರ್ಜಿಗಳು ಬಂದಿದ್ದು ಈ ಪೈಕಿ 14,600 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿದ್ದೇನೆ ಎಂದರು.
ರೈತರು ನನಗೆ ನೀಡಿರುವ ಹಲವು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ನಾಲೆ ಒತ್ತುವರಿ, ತೆಂಗಿಗೆ ನುಸಿಪೀಡೆ ರೋಗ ಇನ್ನಿತರ ಹಲವು ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಬಗೆ ಹರಿಸುವ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ರಾಮಲಿಂಗಯ್ಯ, ರೈತ ಮುಖಂಡರಾದ ಲಿಂಗಾಪ್ಪಜಿ, ವರದರಾಜು, ಸಿದ್ದೇಗೌಡ, ರವಿಕುಮಾರ್, ಕೃಷ್ಣೇಗೌಡ, ಗೊಲ್ಲರದೊಡ್ಡಿ ಅಶೋಕ್, ವಿನೋದ್‌ಬಾಬು, ವೆಂಕಟೇಶ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.