

ಎಚ್.ಡಿ.ಕೋಟೆ: ಮಾಜಿ ಸಂಸದ ದಿ. ಆರ್.ಧ್ರುವನಾರಾಯಣ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅವರ ಅಭಿಮಾನಿ ಬಳಗದವರು ವಿವಿಧ ಸಮಾಜ ಸೇವಾ ಕಾರ್ಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಆರ್.ಧ್ರುವನಾರಾಯಣ ಅಭಿಮಾನಿ ಬಳಗದಿಂದ ಮಂಗಳವಾರ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ಹಾಗೂ ಮೈಸೂರಿನ ಡಿಆರ್‌ಎಂ ಆಸ್ಪತ್ರೆ ವತಿಯಿಂದ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಆರ್.ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಧ್ರುವನಾರಾಯಣ ಅವರು ಸಂಸದರಾಗಿ, ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಅಭಿವೃದ್ಧಿಗೆ ಬಳಸಿದ್ದಕ್ಕಾಗಿ ದೇಶದಲ್ಲೇ ಉತ್ತಮ ಸಂಸದರಾಗಿ ನಾಲ್ಕನೇ ಸ್ಥಾನ ಪಡೆದಿದ್ದರು. ತಾಲೂಕಿನ ಜನತೆ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದರು. ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಏಕಲವ್ಯ ವಸತಿ ಶಾಲೆ, ತಂಬಾಕು ಎರಡನೇ ಹರಾಜು ಮಾರುಕಟ್ಟೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜನಪ್ರಿಯತೆ ಗಳಿಸಿದ್ದರು ಎಂದರು.
ಸುಮಾರು 500ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸತೀಶ್ ಗೌಡ, ಕ್ಯಾತನಹಳ್ಳಿ ನಾಗರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ನಂದಿನಿ, ಸದಸ್ಯ ರವಿ, ಪುರಸಭಾ ಸದಸ್ಯ ಪ್ರೇಮ್ ಸಾಗರ್, ಗ್ರಾಪಂ ಅಧ್ಯಕ್ಷ ಶೈಲೇಂದ್ರ, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವರಾಜು, ಟೌನ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ, ಕಾಂಗ್ರೆಸ್ ವಕ್ತಾರ ಅಶೋಕ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಚಾಮರಾಜು, ಮುಖಂಡರಾದ ಶಪಿ, ಕಾಳಸ್ವಾಮಿ, ನಾಗರಾಜು, ವೈದ್ಯರಾದ ಸುಹಾಸ್, ಕೇಶವ್, ಅರ್ಪಿತಾ, ರಮ್ಯಾ ಇದ್ದರು.