ತಾಲೂಕಿನಲ್ಲಿ ಶೀಘ್ರ ಗಾರ್ಮೆಂಟ್ಸ್ ಆರಂಭ

15 NMG 04
Published on

ನಾಗಮಂಗಲ: ನಿರುದ್ಯೋಗ ಪ್ರಮಾಣ ಕಡಿಮೆಮಾಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಶೀಘ್ರ ಹಲವು ಕೈಗಾರಿಕೆಗಳನ್ನು ಸ್ಥಾಪಿಸುವ ಜತೆಗೆ ಗಾರ್ಮೆಂಟ್ಸ್‌ಗಳನ್ನು ಆರಂಭಿಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.


ತಾಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ನಾನು ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಹಲವು ಉದ್ಯಮಗಳು ಆರಂಭಗೊಳ್ಳಲು ಮುಂದಾಗಿದ್ದವು. ನಂತರ ಅವುಗಳು ಅಲ್ಲಿಗೆ ನಿಂತು ಹೋಗಿದ್ದು ಆ ಕೈಗಾರಿಕೆಗಳ ಮಾಲೀಕರು ಅಥವಾ ಕಂಪನಿಗಳ ಜತೆ ಮಾತನಾಡಿ ಮತ್ತೆ ಆರಂಭಿಸಲು ಕ್ರಮವಹಿಸುತ್ತೇನೆ. ದೇವಿಹಳ್ಳಿ ಪಕ್ಕದಲ್ಲಿ ಈ ಹಿಂದೆ ಗಾಮೆರ್ಂಟ್ ಸ್ಥಾಪನೆ ಮಾಡಲಾಗಿದ್ದು ಅದು ಅರ್ಧಕ್ಕೆ ನಿಂತುಹೋಗಿದೆ. ಮತ್ತೆ ಆ ಗಾಮೆರ್ಂಟ್ಸ್ ಆರಂಭಿಸುವಂತೆ ಕಂಪನಿ ಜತೆ ಮಾತನಾಡಲಾಗುವುದು. ನಾಗಮಂಗಲ ತಾಲೂಕನ್ನು ಕೈಗಾರಿಕಾ ಹಬ್ ಆಗಿ ಪರಿವರ್ತಿಸುವ ಮೂಲಕ ತಾಲೂಕಿನ ಜನತೆಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.


ಸಚಿವನಾಗಿದ್ದು ಆರಂಭದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಒತ್ತಡಗಳಿರುತ್ತವೆ. ಅದನ್ನು ತಾಲೂಕಿನ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ತಾಲೂಕಿಗೆ ಸಮಯ ನೀಡುತ್ತಿಲ್ಲ, ಕಾರ್ಯಕರ್ತರ ಕಷ್ಟ ಸುಖಗಳನ್ನು ಕೇಳುತ್ತಿಲ್ಲವೆಂದು ಅನ್ಯತಾಭಾವಿಸಬೇಡಿ. ಮುಂದಿನ ತಿಂಗಳಿನಿಂದ ತಾಲೂಕಿನಲ್ಲಿಯೇ ಉಳಿದುಕೊಂಡು ಎಲ್ಲರ ಸಮಸ್ಯೆಗಳನ್ನು ಆಲಿಸುತ್ತೇನೆ. ಇಡೀ ರಾಜ್ಯದ ಜನತೆ, ನನಗೆ ಮತಕೊಟ್ಟಿರುವ ನಾಗಮಂಗಲದ ಜನತೆಯನ್ನು ಹೊಗಳುವಂತೆ ಕೃಷಿ ಖಾತೆಯಲ್ಲಿ ಜನಪರವಾದ ಕೆಲಸ ಮಾಡುವ ಮೂಲಕ ತಾಲೂಕಿನ ಗೌರವ ಕಾಪಾಡುತ್ತೇನೆ. ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ಹಲವು ರೈತವಿರೋಧಿ ನೀತಿಗಳನ್ನು ಹಿಂದಿನ ಸರ್ಕಾರ ಜಾರಿಗೆ ತಂದಿದೆ. ಅವುಗಳನ್ನು ಹಂತ ಹಂತವಾಗಿ ರದ್ದುಗೊಳಿಸುವ ಮೂಲಕ ತಿದ್ದುಪಡಿ ಮಾಡಲಾಗುವುದು ಎಂದರು.


ಗ್ರಾಪಂ ಅಧ್ಯಕ್ಷೆ ರಂಗಮ್ಮ, ಸದಸ್ಯರಾದ ದೇವರಾಜು, ತಾಪಂ ಇಒ ಚಂದ್ರಮೌಳಿ, ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಮೇನಕಾ ದೇವಿ, ಪಿಡಿಒ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಮಂಜೇಶ್, ಕೃಷ್ಣೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net