ತಾಲೂಕಿಗೊಂದು ಕೋಳಿ ಫಾರ್ಮ್‌- ಉಕ ಜಿಪಂ‌ ವಿನೂತನ‌ ಯೋಜನೆ

4KWR4-Ishwar-Kandu.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ. ‌ ‌ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ (ಎನ್ ಆರ್ ಎಲ್ ಎಂ) ಅಡಿ ಸ್ವ ಸಹಾಯ ಸಂಘಗಳಿಂದ ತಾಲೂಕಿಗೊಂದು ಕೋಳಿ ಫಾರ್ಮ್ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಜಿಪಂ ಸಿಇಒ ಈಶ್ವರ ಕಾಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆ, ಅಂಗನವಾಡಿಗಳಲ್ಲಿ ಕೋಳಿ ಮೊಟ್ಟೆಯನ್ನು ಪೌಷ್ಠಿಕ ಆಹಾರವಾಗಿ ನೀಡಲಾಗುತ್ತಿದೆ. ದರದಲ್ಲಿ , ಗುಣಮಟ್ಟದಲ್ಲಿ  ತೀರ ವ್ಯತ್ಯಾಸವಾಗುತ್ತಿದೆ. ನಿರಂತರ ಪೂರೈಕೆಯೂ ಸಾಧ್ಯವಾಗುತ್ತಿಲ್ಲ. ಜಿಪಂನಿಂದಲೇ ಸೌಲಭ್ಯ ಕಲ್ಪಿಸಿ ಘಟಕ ಪ್ರಾರಂಭಿಸಲಾಗುವುದು. ಅಲ್ಲಿಂದ ಸಮೀಪದ ಶಾಲೆ, ಅಂಗನವಾಡಿಗಳಿಗೆ ಪೂರೈಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಲಾಗಿದೆ. ಶಿರವಾಡದಲ್ಲಿ ಮಹಿಳಾ  ಸ್ವ ಸಹಾಯ ಸಂಘದಿಂದ ಕಾರ್ಯನಿರ್ವಹಿಸುತ್ತಿರುವ ಚಿಕ್ಕಿ ಘಟಕವೇ ಇದಕ್ಕೆ ಮಾದರಿ ಎಂದರು.
ಪ್ರಥಮ ಹಂತದಲ್ಲಿ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಕಣಸಗಿರಿಯಲ್ಲಿ ಗೋಶಾಲೆಗೆ ನೀಡಿದ ಜಾಗದ ಪಕ್ಕದಲ್ಲೇ ಜಾಗ ನೀಡಲು ವಿನಂತಿಸಲಾಗಿದೆ. ಮುಂದಿನ ಹಂತದಲ್ಲಿ ಜೊಯಿಡಾ, ಹಳಿಯಾಳದಲ್ಲೂ ಇವುಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಮುಂದೆ ಅಂಕೋಲಾದ ಮಾವು, ಇಡಗುಂದಿಯಲ್ಲಿ ಸಿದ್ದಿಗಳ ಬುಡಕಟ್ಟು ಬಿಂಬಿಸುವ ಪ್ರವಾಸೋದ್ಯಮ ಮುಂತಾದ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಜಲಜೀವನ ಮಿಷನ್ ನಾಲ್ಕನೇ ಹಂತದಲ್ಲಿ 500 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಆಗಿ ಕೆಲಸ  ಪ್ರಾರಂಭವಾಗಬೇಕಿವೆ. ಮೊದಲ ಹಂತದ ಎಲ್ಲ 261 ಕಾಮಗಾರಿಗಳೂ ಮುಕ್ತಾಯವಾಗಿವೆ. ಎರಡು, ಮೂರನೇ ಹಂತದ ಕಾಮಗಾರಿಗಳು ನಡೆದಿವೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಥ್ಲೆಟಿಕ್ ಟ್ರಾಕ್ ,ಶಾಲೆ ಮೈದಾನ, ಕಾಲು ಸಂಕ, ಮುಕ್ತಿಧಾಮ, ಕಾಂಡ್ಲಾ ವನ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ.
ಗ್ರಂಥ ಮಿತ್ರ ಎಂಬ ಯೋಜನೆ ಜಾರಿಗೆ ತರಲಾಗಿದೆ. ಅದರಲ್ಲಿ ತಾಲೂಕಿಗೆ ಒಂದು ಮಾದರಿ ಗ್ರಂಥಾಲಯ ಗುರುತಿಸಲಾಗುವುದು. ಅಲ್ಲಿ ಸಮೀಪದ ಶಾಲೆ, ಹೈಸ್ಕೂಲ್‌ಗಳ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳನ್ನು ಜೋಡಿಸಿ ವಾರಾಂತ್ಯದಲ್ಲಿ  ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರವಾರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ಸಹಕಾರದಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದರು.
ಚಾಲನೆಗೆ ಬಾರದ ಮಹಿಳೆಯರು:
ಜಿಲ್ಲೆಯಲ್ಲಿ ಇನ್ನೂ 10 ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಆರಂಭವಾಗಬೇಕಿವೆ. ಜಿಲ್ಲೆಯ 93 ಗ್ರಾಪಂಗಳಿಗೆ ಕಸ ಸಂಗ್ರಹಣೆಗೆ ಆಟೋ ಟಿಪ್ಪರ್ ನೀಡಲಾಗಿದೆ. ಅದರ ನಿರ್ವಗಣೆಯ ಜವಾಬ್ದಾರಿಯನ್ನು ಸ್ವ ಸಹಾಯ ಸಂಘಗಳ ಸದಸ್ಯರಿಗೆ ವಹಿಸಲಾಗಿದೆ. ಈಗಾಗಲೇ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಆದರೆ, ಇದುವರೆಗೆ 54 ಮಹಿಳೆಯರು ಮಾತ್ರ ವಾಹನ ಚಾಲನೆಗೆ ಮುಂದೆ ಬಂದಿದ್ದಾರೆ. ಉಳಿದವರು ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಕಾರಣ ನೀಡಿ ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರಿಗೆ ಸಮೀಪದ ತಾಲೂಕುಗಳಲ್ಲಿಯೇ ಚಾಲನಾ ತರಬೇತಿ ವ್ಯವಸ್ಥೆ ಮಾಡಲಾಗಿದೆ ಎಂದರು.



ಬಕೆಟ್ ಅಕ್ರಮ ತನಿಖೆ
ಸ್ವಚ್ಛ ಭಾರತ ಮಿಷನ್ ಅಡಿ ಭಟ್ಕಳದ ಮಾರುಕೇರಿ ಮತ್ತು ಶಿರಾಲಿ ಗ್ರಾಮ ಪಂಚಾಯಿತಿಗಳಲ್ಲಿ  ಸಾಮಾನ್ಯಕ್ಕಿಂತ ಅತ್ಯಽಕ ಬೆಲೆಗೆ ಬಕೆಟ್‌ಗಳನ್ನು ಖರೀದಿಸಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಇಲಾಖಾ ತನಿಖೆ ನಡೆಸಿದಾಗ ಅಕ್ರಮ ಸಾಬೀತಾಗಿದ್ದು, ಸಂಬಂಧಪಟ್ಟ ಗ್ರಾಪಂ ಪಿಡಿಒಗಳಿಂದ 60 ಸಾವಿರ ರೂ.ಗಳನ್ನು ವಸೂಲು ಮಾಡಲಾಗಿದೆ. ಆದರೆ, ಇತರ ಗ್ರಾಪಂಗಳಲ್ಲೂ ಇಂಥ ಅಕ್ರಮ ನಡೆದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಇಒಗಳಿಗೆ ಸೂಚಿಸಲಾಗುವುದು ಎಂದು ಜಿಪಂ ಸಿಇಒ ಈಶ್ವರ ಕಾಂದೂ ಮಾಹಿತಿ ನೀಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net