ತಾಲೂಕಾಸ್ಪತ್ರೆಯಲ್ಲಿ ಜ್ವರ ತಪಾಸಣೆ ಕೇಂದ್ರ

24mnd1
Published on

ಮುಂಡಗೋಡ: ಕರೊನಾ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ತಾಲೂಕಿನಿಂದ ಬೇರೆ ಊರುಗಳಿಗೆ ಕೆಲಸಕ್ಕೆಂದು ಹೋಗಿ ಮರಳಿ ಬಂದವರಿಗಾಗಿ ಪಟ್ಟಣದ ತಾಲೂಕಾಸ್ಪತ್ರೆ ಆವರಣದಲ್ಲಿ ಜ್ವರ ತಪಾಸಣೆ ವಿಶೇಷ ಕೇಂದ್ರ ತೆರೆಯಲಾಗಿದೆ.

ಅವರು ಯಾವ ಊರಿನಿಂದ ಬಂದವರು, ತಾಲೂಕಿನಲ್ಲಿ ಅವರು ಇರುವ ವಿಳಾಸ, ಅವರ ಜತೆಗೆ ಇನ್ಯಾರ ಸಂಪರ್ಕವಿದೆ ಮತ್ತು ಮೊಬೈಲ್ ನಂಬರ್ ಈ ಎಲ್ಲ ವಿವರಗಳನ್ನು ತಪಾಸಣೆ ಕೇಂದ್ರದಲ್ಲಿ ಪಡೆಯಲಾಗುವುದು. ನಂತರ ಪರೀಕ್ಷೆ ಮಾಡಿ ಜ್ವರ ಅಥವಾ ಇನ್ಯಾವ ಗುಣ ಲಕ್ಷಣಗಳು ಇಲ್ಲವಾದಲ್ಲಿ ಅವರಿಗೆ ಒಂದು ಪತ್ರ ನೀಡಿ 14 ದಿನಗಳವರೆಗೆ ಮನೆಯಲ್ಲಿಯೇ ಇರಲು ತಿಳಿಸಿ ಕಳುಹಿಸಲಾಗುವುದು. ಆಕಸ್ಮಾತ್ತಾಗಿ ಜ್ವರವೇನಾದರೂ ಇದ್ದರೆ ಅವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗುವದು. ನಂತರ ಅದೇ ವ್ಯಕ್ತಿಗೆ ಉಸಿರಾಟದ ತೊಂದರೆ, ಕೆಮ್ಮು ಅಥವಾ ಗಂಟಲು ನೋವು ಜಾಸ್ತಿಯಾದರೆ ತಕ್ಷಣ ಆಸ್ಪತ್ರೆಗೆ ಬರಲು ತಿಳಿಸಲಾಗುತ್ತದೆ. ಇಲ್ಲಿ ಬಂದು ಹೋದವರ ಮನೆಗೆ ಪ್ರತಿ ದಿನ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಡುತ್ತಾರೆ. ಸ್ಟಾಫ್ ನರ್ಸ್, ಇಬ್ಬರು ಗ್ರುಪ್- ಡಿ ನೌಕರರು ಥರ್ಮಲ್ ಸ್ಕಾ್ಯನರ್ ಮೂಲಕ ಜ್ವರ ತಪಾಸಣೆ ಮಾಡುತ್ತಾರೆ. ಬೆಂಗಳೂರು, ಮಂಗಳೂರು, ಉಡುಪಿ, ಗೋವಾ, ಸುಬ್ರಹ್ಮಣ್ಯ ಇತರ ಕಡೆಗಳಿಂದ ಕೆಲಸಕ್ಕೆ ಹೋದವರು ಬರುತ್ತಿದ್ದಾರೆ.

ಪ್ರತಿಯೊಂದು ಗ್ರಾಮಕ್ಕೂ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 12 ಜನ ಸದಸ್ಯರ ಒಂದು ಸಮಿತಿ ರಚನೆ ಮಾಡಲಾಗಿದೆ. ಸಮಿತಿಯವರು ಬೇರೆ ಊರಿನಿಂದ ಬಂದವರ ಮಾಹಿತಿ ಪಡೆದು 14 ದಿನಗಳವರೆಗೆ ಅವರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಗುಣ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಕಳಿಸಬೇಕು.

ಸರ್ಕಾರದ ಆದೇಶದ ಪ್ರಕಾರ ಮಾ. 31ರವರೆಗೆ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಸಹಕಾರ ನೀಡದ ಹೊರತು ತಾಲೂಕಾಡಳಿತ, ಆರೋಗ್ಯ ಅಥವಾ ಪೊಲೀಸ್ ಇಲಾಖೆಯಾಗಲಿ ಏನೂ ಮಾಡಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರಬೇಕು. ಅನವಶ್ಯವಾಗಿ ಬರಬಾರದು. ನಾವು ನಿಮ್ಮ ಸಲುವಾಗಿ ಕೆಲಸ ಮಾಡುತ್ತೇವೆ. ನೀವು ಮಾತ್ರ ಮನೆಯಲ್ಲಿರಿ. | ಎಚ್.ಎಫ್. ಇಂಗಳೆ ತಾಲೂಕಾಡಳಿತ ವೈದ್ಯಾಧಿಕಾರಿ

ಅಗತ್ಯ ವಸ್ತು ಖರೀದಿಗಷ್ಟೇ ಹೊರಗೆ ಬಂದ ಜನತೆ
ಮುಂಡಗೋಡ: ತಾಲೂಕಿನಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣವೆಲ್ಲ ಸ್ತಬ್ಧವಾಗಿತ್ತು.
ಪಟ್ಟಣದ ಹುಬ್ಬಳ್ಳಿ- ಶಿರಸಿ ಮತ್ತು ಯಲ್ಲಾಪುರ-ಬಂಕಾಪುರ ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಆಗೊಂದು- ಈಗೊಂದು ಖಾಸಗಿ ವಾಹನಗಳು ಸಂಚಾರ ಮಾಡುತ್ತಿದ್ದವು.ಬಸ್​ಗಳ ನಿಲುಗಡೆ ಇಲ್ಲದೆ ಬಸ್ ನಿಲ್ದಾಣ ಭಣಗುಡುತ್ತಿತ್ತು. ಕೆಲವು ಔಷಧ ಅಂಗಡಿ, ಹಾಲಿನ ಅಂಗಡಿ, ಹಣ್ಣಿನ ಅಂಗಡಿ ಮತ್ತು ದಿನಸಿ ಅಂಗಡಿ ಬಿಟ್ಟರೆ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅವಶ್ಯಕ ವಸ್ತುಗಳಿಗಾಗಿ ಮಾತ್ರ ಜನರು ಹೊರ ಬೀಳುತ್ತಿರುವುದು ಸಾಮಾನ್ಯವಾಗಿತ್ತು. ಈ ಮಧ್ಯೆ ಪೊಲೀಸರು ಮುಖಗವಸು ಧರಿಸದ ಪಾದಚಾರಿಗಳಿಗೆ ಮತ್ತು ಬೈಕ್ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿರುವುದು ಕಂಡು ಬಂತು. ತಾಲೂಕಿನಾದ್ಯಂತ ಸಿಪಿಐ ಶಿವಾನಂದ ಚಲವಾದಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕಡ್ಡಾಯವಾಗಿ ಎಲ್ಲರೂ ತಮ್ಮ ಮನೆಯಲ್ಲಿಯೇ ಇರಬೇಕು. ಅವಶ್ಯಕತೆ ಇದ್ದಲ್ಲಿ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಗಳೇನಾದರೂ ಇದ್ದಲ್ಲಿ ಮಾತ್ರ ಬರಬಹುದು. ನಿಮಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಅನವಶ್ಯವಾಗಿ ಯಾರೂ ಉಡಾಫೆ ಮಾಡಬಾರದು. ಸರ್ಕಾರದ ಕಟ್ಟು ನಿಟ್ಟಿನ ಆದೇಶದ ಪ್ರಕಾರ ಸೆಕ್ಷನ್ 188, 270, 271 ಅಡಿ ಪ್ರಕರಣ ದಾಖಲಿಸಲಾಗುವುದು.| ಶ್ರೀಧರ ಮುಂದಲಮನಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net