

ವಿಜಯವಾಣಿ ಸುದ್ದಿಜಾಲ, ಕುಮಟಾ
ಕುಡಿತದ ದಾಸನಾಗಿದ್ದ ಮಗ ಹಣಕ್ಕಾಗಿ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೂಜಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಈ ಕುಕೃತ್ಯಕ್ಕೆ ತಂದೆಯೂ ಮಗನಿಗೆ ಸಹಕಾರ ನೀಡಿದ್ದ ಎಂಬುದು ಇನ್ನೊಂದು ಆಘಾತಕಾರಿ ಸಂಗತಿ.
ಮೇಲಿನ ಕೂಜಳ್ಳಿಯ ಬಚ್ಕಂಡದ ಗೀತಾ ವಿಶ್ವೇಶ್ವರ ಭಟ್ಟ(61) ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಮಹಿಳೆಯ ಪತಿ ವಿಶ್ವೇಶ್ವರ ಎನ್.ಭಟ್ಟ (65) ಹಾಗೂ ಅವರ ಮಗ ಮಧುಕರ ಭಟ್ಟ(45) ಇವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಪರೀತ ಕುಡಿತದ ದಾಸನಾಗಿದ್ದ ಮಧುಕರ ಹಣಕ್ಕಾಗಿ ಪದೇಪದೇ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮಂಗಳವಾರ ರಾತ್ರಿಯೂ ವಿಪರೀತ ಗಲಾಟೆಯಾಗಿತ್ತು.ಆ ಸಂದರ್ಭದಲ್ಲಿ ತಂದೆಯೊಂದಿಗೆ ಸೇರಿ ತಾಯಿಯನ್ನು ರೀಪಿನಿಂದ (ಮೇಲ್ಛಾವಳಿಗೆ ಬಳಸುವ ಮರದ ತುಂಡು) ಹೊಡೆದು ಕೊಂದಿದ್ದ. ಬುಧವಾರ ಬೆಳಗ್ಗೆ ಗೀತಾಳ ಪತಿ ವಿಶ್ವೇಶ್ವರ ಭಟ್ಟ ತನ್ನ ಪತ್ನಿ ಹೃದಯಾಘಾತದಿಂದ ಸತ್ತುಹೋದಳೆಂದು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದ. ಮೃತದೇಹವನ್ನು ಸುಟ್ಟು ಅಂತ್ಯಸಂಸ್ಕಾರಕ್ಕೆ ಸಿದ್ಧತೆಯನ್ನೂ ಮಾಡಿದ್ದ. ಆದರೆ ಸ್ಥಳೀಯ ವೆಂಕಟರಮಣ ಭಟ್ಟ ಅವರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ, ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.