ತಾಯಿ ಸ್ವರೂಪಿ ಪಕ್ಷಕ್ಕೆ ಅನ್ಯಾಯ ಸಹಿಸಲ್ಲ

bkt-20-2
ಬಾಗಲಕೋಟೆ ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದು ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
Published on

ಬಾಗಲಕೋಟೆ: ದಲಿತ, ಹಿಂದುಳಿದ ಸಮಾಜಗಳ ಹಕ್ಕಿಗಾಗಿ ಹೊಸ ಬ್ರಿಗೇಡ್ ಸ್ಥಾಪಿಸಲಾಗುತ್ತಿದೆ. ಹಿಂದುತ್ವದ ಉಳಿವಿಗಾಗಿ ಈ ಹೋರಾಟ. ವೈಯಕ್ತಿಕ ರಾಜಕೀಯ ಹಿತಾಸಕ್ತಿ ಇಲ್ಲ. ಸಮಾಜ ಸದುದ್ದೇಶಕ್ಕೆ ಹೊಸ ಹೆಜ್ಜೆ ಇಡಲಾಗುತ್ತಿದೆ. ತಾಯಿ ಸ್ವರೂಪಿ ಬಿಜೆಪಿ ಪಕ್ಷಕ್ಕೆ ಅನ್ಯಾಯ ಸಹಿಸಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದು ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷ ಈಶ್ವರಪ್ಪ ವ್ಯಕ್ತಿ ನಿರ್ಮಾಣ ಮಾಡಿದೆ. ತಾಯಿ ಸ್ವರೂಪಿ ಪಕ್ಷಕ್ಕೆ ಅನ್ಯಾಯವಾಗುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾಲ್ಕು ಜನರ ಕಪಿಮುಷ್ಠೆಯಲ್ಲಿ ಪಕ್ಷ ಇರುತ್ತಿರುವುದು ನೋವು ತರಿಸಿದೆ. ಹಿರಿಯರು ಪಕ್ಷಕ್ಕಾಗಿ ರಕ್ತ ಸುರಿಸಿದ್ದಾರೆ. ಬೇರೆ ಪಕ್ಷಕ್ಕೆ ಹೋಗಬಹುದಿತ್ತು. ತಾಯಿ ಕತ್ತು ಹಿಚುಕಿದಂತಾಗುತ್ತದೆ. ಅನ್ಯಾಯ ಮಾಡಿದಂತಾಗುತ್ತಿದೆ. ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿ ದ್ರೋಹ ಮಾಡುವ ಗುಣ ಕಲಿಸಿಲ್ಲ. ಪಕ್ಷ ನನ್ನ ಡಿಸಿಎಂ ಮಾಡಿದೆ. ಈ ಹಿಂದೆ ಬ್ರಿಗ್ರೇಡ್ ಸ್ಥಾಪನೆ ಮಾಡಲಾಗಿತ್ತು. ಆದರೇ ಹಿರಿಯರ ಮಾತಿಗೆ ಗೌರವ ಕೊಟ್ಟು ನಿಲ್ಲಿಸಲಾಯಿತು. ಇದೀಗ ಹೊಸದಾಗಿ ಬ್ರಿಗ್ರೇಡ್ ಸ್ಥಾಪನೆ ಮಾಡಲಾಗುವುದು. ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಕ್ರಾಂತಿ ಹಬ್ಬದ ದಿನ ನಾಡಿನ ಮಠಾಧೀಶರು ಸ್ವಾಮೀಜಿಗಳು ಬ್ರಿಗ್ರೇಡ್‌ಗೆ ಹೊಸ ನಾಮಕರಣ ಮಾಡುತ್ತಾರೆ. ಅಂದು ಸಾವಿರಾರು ಸ್ವಾಮೀಜಿಗಳಿಗೆ ಪಾದಪೂಜೆ ಮಾಡುತ್ತೇವೆ. ಹಿಂದುಳಿದ ಹಿಂದು ಸಮಾಜದ ಹಕ್ಕುಗಳಿಗೆ ಹೋರಾಟ ನಡೆಯಲಿದೆ. ಯಾವುದೇ ಸರ್ಕಾರವಿರಲಿ ಅವುಗಳ ನೆರವಿಗೆ ನಿಲ್ಲುವ ಹಾಗೇ ಮಾಡಲಾಗುವುದು ಎಂದು ಹೇಳಿದರು.
ತಿಂಥಣಿ ಕನಕಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ನವರಿಗೆ ಬಿಜೆಪಿ ಪಕ್ಷದಿಂದ ಅನ್ಯಾಯವಾಗಿಲ್ಲ. ಈಶ್ವರಪ್ಪನವರಿಗೆ ಹೂರಗೆ ಹಾಕಿದ್ದಕ್ಕೆ ಬಿಜೆಪಿಗೆ ಅನ್ಯಾಯವಾಗಿದೆ. ಎಲ್ಲೆಡೆ ಕುಟುಂಬದ ರಾಜಕಾರಣ, ಸ್ವಾರ್ಥ ಹೆಚ್ಚಾಗಿದ್ದು,ನಿಸ್ವಾರ್ಥ ರಾಜಕಾರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಶ್ವರಪ್ಪ ತಮ್ಮ ರಾಜಕೀಯ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಅವರ ಬೆನ್ನಿಗೆ ಮಠಾಧೀಶರು ನಿಲ್ಲಲಾಗುವುದು ಎಂದು ಅಭಯ ನೀಡಿದರು.

ಕೆ.ಎಸ್.ಕಾಂತೇಶ ಮಾತನಾಡಿ, ಹೊಸ ಬ್ರಿಗ್ರೇಡ್ ಹಿಂದುಳಿದ, ದಲಿತ ವರ್ಗದ ಹಿತ ಕಾಯಲಿದೆ. ರಾಯಣ್ಣ ಬ್ರಿಗ್ರೇಡ್ ಹಿಂಪಡೆದುಕೊಂಡಿದ್ದು ದುರ್ದೈವ. ಇಂದು ಹುಳಿಗಳು ಒಂದೇಡೆ ಸೇರಿ ಹೊಸ ಮನ್ವಂತ ಸೃಷ್ಟಿಸಲಿದ್ದೇವೆ. ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹೊಸ ಸಂಘಟನೆ ಅಸ್ತಿತ್ವಕ್ಕೆ ಬರಲಿದೆ. ನಮ್ಮ ತಂದೆ ಜಾತಿ ಮಾಡಿಲ್ಲ. ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದರು.

ಮಾಜಿ ಶಾಸಕ ಗೋಳಿಹಟ್ಟಿ ಶೇಖರ ಮಾತನಾಡಿ, ದಲಿತ, ಹಿಂದುಳಿದ ವರ್ಗಗಳ ಸಮಸ್ಯೆ ಬೆಟ್ಟದಷ್ಟು ಇದೆ. ಸ್ವಯಂ ಸಂಘಟನೆ ಅಗತ್ಯವಿದ್ದು, ನಾನು ಕೈ ಜೋಡಿಸುತ್ತೇನೆ. ಜಾತಿಗೊಂದು ನಿಗಮ ಮಾಡುತ್ತಾರೆ. ಆದರೇ ಅನುದಾನ ನೀಡುವದಿಲ್ಲ. ಜಯಂತಿಗಳನ್ನು ಮಾಡಿ ಕೈ ತೊಳೆದುಕೊಳ್ಳಲಾಗುತ್ತದೆ. ಭೋಮಿ ಖರೀದಿ, ಬೋರವೆಲ್ ಅನುದಾನ ದೊರೆಯುತ್ತಿಲ್ಲ. ನಿಜವಾಗಿಯೂ ಸಮಾಜಕ್ಕೆ ಅನುಕೂಲವಾಗುವ ಯಾವುದೇ ಯೋಜನೆ, ಕಾರ್ಯಕ್ರಮ ನೀಡುವದಿಲ್ಲ. ಪ್ರತಿ ಸರ್ಕಾರಗಳು ಇದನ್ನೆ ಮಾಡಿಕೊಂಡು ಬಂದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕನಾಪುರದ ಸೋಮಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದ ವ್ಯಕ್ತಿಯಿಂದ ಏನೆಲ್ಲ ಲಾಭ ಪಡೆದು ಅವನನ್ನು ತುಳಿಯುವುದು ಯಾವ ರಾಜಕೀಯ. ಈಶ್ವರಪ್ಪ ಅವರಿಗೆ ಅನ್ಯಾಯವಾದರೆ ಯಾರೂ ಪ್ರಶ್ನೆ ಮಾಡಲಿಲ್ಲ. ಪಕ್ಷ ಬಿಟ್ಟು ಹೊರಗೆ ಹೋಗಿ ಬಂದವರಿಗೆ ೪ ಬಾರಿ ಮುಖ್ಯಮಂತ್ರಿ ಮಾಡುವುದು ಯಾವ ನ್ಯಾಯ. ಹಿಂದುಳಿದವರನ್ನು ತುಳಿದರೆ, ಭಗವಂತ ನಿಮ್ಮನ್ನು ತುಳಿಯುತ್ತಾನೆ ಎಂದು ಬಿಜೆಪಿ ನಾಯಕರಿಗೆ ಛಾಟಿ ಬೀಸಿದರು.

ಹಿಂದುಳಿದ, ದಲಿತ ವರ್ಗದವರ ಏಳಿಗೆಗೆ ಶ್ರಮಿಸುವ ಈಶ್ವರಪ್ಪ ಅವರ ಬೆನ್ನಿಗೆ ಎಲ್ಲ ಸ್ವಾಮಿಗಳು ಇದ್ದೇವೆ. ಹಿಂದುತ್ವ, ಹಿಂದೂ ಸಂಸ್ಕೃತಿ ಉಳಿವಿಗೆ ಕೈ ಜೋಡಿಸಲಾಗುವುದು ಕಾರ್ಯಕ್ರಮದಲ್ಲಿ ೫೦ ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಘೋಷಣೆ ಮಾಡಿದರು. ಜಿಲ್ಲೆಯ ಅನೇಕ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಕಾಣಿಸಿಕೊಂಡರು. ಜಕನೂರಿನ ಮಾದುಲಿಂಗ ಸ್ವಾಮೀಜಿ,ಸೋಮೇಶ್ವರ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಶರಭಯ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಹುಬ್ಬಳ್ಳಿಯ ಚಂದ್ರಶೇಖರ ಸ್ವಾಮೀಜಿ, ಅಭಿನವ ಬಸವರಾಜ ಸ್ವಾಮೀಜಿ, ಮಾಧುಲಿಂಗ ಸ್ವಾಮೀಜಿ, ಸೇಡಂನ ಮಾತಾ ನಂದೀಶ್ವರಿ, ಹುಲಿಜಂತಿ ಮಾಳಿಂಗರಾಯ ಸ್ವಾಮೀಜಿ, ಚಿಕ್ಕಗಲಗಲಿಯ ಜನಾರ್ಧನ ಸ್ವಾಮೀಜಿ ಹಾಗೂ ಅಮರೇಶ್ವರ ಸ್ವಾಮೀಜಿ, ಮಾಜಿ ಶಾಸಕ ಗೋಳಿಹಟ್ಟಿ ಶೇಖರ, ವೀರಣ್ಣ ಹಳೇಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net