

ಬಾಗಲಕೋಟೆ: ಸರಾಯಿ ಕುಡಿತದ ಚಟಕ್ಕೆ ದಾಸನಾಗಿದ್ದ ತಂದೆಯನ್ನೆ ತಾಯಿ ಜೊತೆ ಸೇರಿ ಕೊಲೆ ಮಾಡಿದ್ದ ಪುತ್ರ ಹಾಗೂ ತಾಯಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಜೀವಾವಧಿ ಶಿಕ್ಷೆ, ೮ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಶಿವಾನಂದ ಬಸಪ್ಪ ಹೊಸಗೌಡರ, ಮಾಂತವ್ವ ಹೊಸಗೌಡ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಬಾದಾಮಿ ತಾಲೂಕಿನ ಗೋನಾಳ ಗ್ರಾಮದ ಬಸಪ್ಪ ಹೊಸಗೌಡ ಕುಟುಂಬ ವಾಸವಾಗಿತ್ತು. ನಿತ್ಯವು ಬಸಪ್ಪ ಕುಡಿತದ ಚಟಕ್ಕೆ ಬಲಿಯಾಗಿದ್ದರು. ಇದರಿಂದ ಆಕ್ರೋಶಗೊಂಡ ಪುತ್ರ ಶಿವಾನಂದ ಹಾಗೂ ಪತ್ನಿ ಮಾಂತವ್ವ ತಲೆಗೆ ಬಲವಾಗಿ ಗಾಯವಾಗುವಂತೆ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದರು. ನಂತರ ಪ್ರಕರಣ ಮುಚ್ಚಿ ಹಾಕಲು ಹಾಗೂ ಸಾಕ್ಷಿ ನಾಶ ಪಡಿಸಲು ಮುಂದಾಗಿದ್ದರು. ಈ ಕುರಿತು ಬಾದಾಮಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಪಿಎಸ್‌ಐ ನೇತ್ರಾವತಿ ಪಾಟೀಲ ಮತ್ತು ಪ್ರಕರಣದ ತನಿಖಾಧಿಕಾರಿ ಸಿಪಿಐ ರಮೇಶ ಹಾನಾಪುರ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಾಯಕ್ಕೆ ದೋಷಾರೊಪಣೆ ಪಟ್ಟಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯ ಪ್ರಕರಣ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ, ೮ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.