ರಾಣೆಬೆನ್ನೂರ: ಇಲ್ಲಿಯ ತಾಲೂಕು ಪಂಚಾಯಿತಿ ನೌಕರನೊಬ್ಬ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಲು ಮುಂದಾಗಿ ಇದನ್ನು ವಿರೋಧಿಸಿದ ಆಕೆಯನ್ನು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ಕುರಿತು ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಗರದ ತಾಪಂ ಪ್ರಥಮ ದರ್ಜೆ ಸಹಾಯಕ ಹಾಗೂ ತಾಲೂಕಿನ ಕೋಣನತಲೆ ಗ್ರಾಮದ ನಿವಾಸಿ ಮಹೇಶಪ್ಪ ಸಿದ್ದಪ್ಪ ಖಾಸಂಬಿ (57) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.
ಈ ಕುರಿತು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಮಹೇಶಪ್ಪ ಕೆಲ ದಿನಗಳಿಂದ ಲೈಂಗಿಕ ಚಟುವಟಿಕೆಗೆ ಪ್ರಚೋದಿಸುತ್ತಾ ಬಂದಿದ್ದು, ನಾನು ಅದನ್ನು ತಿರಸ್ಕರಿಸಿದಾಗ ನನಗೆ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಾ ನೀಡುತ್ತಿದ್ದ. ಜ. 30ರಂದು ರಾತ್ರಿ ಮನೆಯಲ್ಲಿ ಒಬ್ಬಳೆ ಇದ್ದಾಗ ಬಂದು, ಬಾಗಿಲು ತೆಗೆಯುವಂತೆ ಕೇಳಿದನು. ನಾನು ಬಾಗಿಲು ತೆಗೆಯದಿದ್ದಾಗ, ಬಾಗಿಲು ಮುರಿದು ಒಳಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ. ಇದಕ್ಕೆ ವಿರೋಧ ಪಡಿಸಿದ್ದಕ್ಕೆ ಬಡಿಗೆ ಯಿಂದ ಹೊಡೆದು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ. ಅಲ್ಲದೆ ನಿನ್ನನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ಆರೋಪಿ ವಿರುದ್ಧ 451, 376, 511, 307, 324, 504, 506 ಐಸಿಪಿ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ದೂರು ದಾಖಲಾಗುತ್ತಿದ್ದಂತೆ ತಲೆ ಮರಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನೂ ಬಂಧನವಿಲ್ಲ… ಆರೋಪಿ ವಿರುದ್ಧ ದೂರು ದಾಖಲಾಗಿ ಒಂದು ವಾರ ಕಳೆಯುತ್ತ ಬಂದಿದೆ. ಆದರೂ ಪೊಲೀಸರು ಈವರೆಗೂ ಆರೋಪಿಯನ್ನು ಬಂಧಿಸದಿರುವುದು ನೊಂದ ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ದೂರು ದಾಖಲಾಗುವ ದಿನದಂದು ಆರೋಪಿ ಠಾಣೆಯಲ್ಲಿಯೆ ಇದ್ದ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರನ್ನು ಕೇಳಿದರೆ ತನಿಖೆ ಮಾಡದೆ ಆರೋಪಿಯನ್ನು ಬಂಧಿಸಲಾಗಲ್ಲ ಎನ್ನುವ ಉತ್ತರ ನೀಡಿದರು.