ತರಗತಿಯಿಂದ ಹೊರಗುಳಿದು ವಿದ್ಯಾರ್ಥಿಗಳ ಪ್ರತಿಭಟನೆ

05 yelandur 02
Published on

ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ಎಂ.ವೀರಭದ್ರಸ್ವಾಮಿ ಅವರನ್ನು ಅಮಾನತುಗೊಳಿಸಿರುವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕ್ರಮವನ್ನು ಖಂಡಿಸಿ ಬುಧವಾರ ವಿದ್ಯಾರ್ಥಿಗಳು ತರಗತಿಯಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ಇದರೊಂದಿಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರೂ ಪ್ರತಿಭಟನೆಗೆ ಸಾಥ್ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಮಾತನಾಡಿ, ಡಿ.28ರಂದು ಶಾಲೆಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಸ್ ಚಾಲಕನಿಗೆ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಚಾಲನೆ ಗೊತ್ತಿದ್ದ ಶಿಕ್ಷಕ ಎಂ.ವೀರಭದ್ರಸ್ವಾಮಿ ಬಸ್ ಚಲಾಯಿಸಿ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ನಂತರ ಚಾಲಕನಿಗೆ ಅಲ್ಲೇ ಚಿಕಿತ್ಸೆ ನೀಡಿ ಆತ ಚೇತರಿಸಿಕೊಂಡ ನಂತರ ಅಲ್ಲಿಂದ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ. ನಮ್ಮ ಮಕ್ಕಳನ್ನು ದೊಡ್ಡ ದುರಂತದಿಂದ ಅವರು ಪಾರುಮಾಡಿ ಕರೆದುಕೊಂಡು ಬಂದಿದ್ದರೂ ಅವರನ್ನು ಏಕಾಏಕಿ ಅಮಾನತು ಮಾಡಲಾಗಿದೆ. ಈ ಶಾಲೆಯ ಪ್ರಾಮಾಣಿಕ ಶಿಕ್ಷಕರಾಗಿದ್ದು ಶಾಲೆಯ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಈ ಶಾಲೆಯಲ್ಲಿ 149 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 61 ವಿದ್ಯಾರ್ಥಿಗಳಿದ್ದಾರೆ. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಹತ್ತಿರದಲ್ಲಿದೆ. ಇತರ ತರಗತಿಗಳ ಮಕ್ಕಳಿಗೂ ಪರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರನ್ನು ಅಮಾನತುಗೊಳಿಸಿರುವ ಕ್ರಮ ಖಂಡನೀಯವಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಅವರನ್ನು ವಾಪಸ್ ಸೇವೆಗೆ ಸೇರಿಸಿಕೊಳ್ಳಬೇಕು. ಅವರನ್ನು ಮರು ನೇಮಕ ಮಾಡಬೇಕು. ಅವರು ಬಾರದೆ ನಾವು ಶಾಲೆಗೆ ಹೋಗುವುದಿಲ್ಲ ಎಂದು ನಮ್ಮ ಮಕ್ಕಳು ಹೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಬಂದು ಅವರ ಅಮಾನತಿನ ಆದೇಶವನ್ನು ಹಿಂಪಡೆಯುವತನಕ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.

ಕಣ್ಣೀರಿಟ್ಟ ವಿದ್ಯಾರ್ಥಿಗಳು: ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಾಲಕರ ಎದುರಿಗೆ ಕುಳಿತು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಹಾಗೂ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನಂಜುಂಡಯ್ಯ ಭೇಟಿನೀಡಿ ನೀವು ತರಗತಿಗೆ ತೆರಳಿ ಎಂದು ಮನವೊಲಿಸುವ ಪ್ರಯತ್ನ ನಡೆಸಿದರೂ ವಿದ್ಯಾರ್ಥಿಗಳು ವೀರಭದ್ರಸ್ವಾಮಿ ಅವರ ಅಮಾನತನ್ನು ವಾಪಸ್ ಪಡೆಯಬೇಕು. ಅವರು ಶಾಲೆಗೆ ಬರಬೇಕು, ಆಗಲೇ ನಾವು ತಗರತಿಗೆ ಹೋಗುತ್ತೇವೆ ಎಂದು ಪಟ್ಟುಹಿಡಿದು ಶಾಲೆಯ ಮುಂಭಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ಸುನೀತಾ ನಮ್ಮ ಶಿಕ್ಷಕ ವೀರಭದ್ರಸ್ವಾಮಿ ಸರ್ ಬಸ್ ಚಾಲನೆ ಮಾಡಿ ನಮ್ಮ ಪ್ರಾಣ ರಕ್ಷಣೆ ಮಾಡಿದ್ದಾರೆ. ಚಾಲಕನಿಗೆ ಹುಷಾರಿಲ್ಲದ ಕಾರಣ ರಸ್ತೆ ಬದಿಗೆ ಬಸ್ ನಿಲ್ಲಿಸಿದ್ದು ಇವರ ತಪ್ಪೇ?, ನಮ್ಮನ್ನು ರಕ್ಷಣೆ ಮಾಡಿದ್ದು ತಪ್ಪೆ? ಸದಾ ನಮ್ಮ ಒಳಿತನ್ನೇ ಬಯಸಿ, ನಮಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಕೊಡಿಸುವ ಇಂತಹ ಶಿಕ್ಷಕರನ್ನು ಅಮಾನತು ಮಾಡಿರುವ ಕ್ರಮ ಸರಿಯೇ ಎಂದು ಅಧಿಕಾರಿಗಳ ಮುಂದೆ ಕಣ್ಣೀರಿಟ್ಟು ಪ್ರಶ್ನಿಸಿದ ಘಟನೆಯೂ ನಡೆಯಿತು. ಈ ಪ್ರಶ್ನೆಗಳಿಂದ ತಬ್ಬಿಬ್ಬಾದ ಬಿಇಒ ಹಾಗೂ ಬಿಆರ್‌ಸಿ ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡುವ ಭರವಸೆ ನೀಡಿ ಅಲ್ಲಿಂದ ತೆರಳಿದರು.

ಎಸ್‌ಡಿಎಂಸಿ ಸದಸ್ಯರಾದ ಅಂಬಿಕಾ, ಪದ್ಮಾ, ಶಿವಣ್ಣ, ಸುಧಾ, ಸುಮಾ, ಸುಂದ್ರಮ್ಮ, ಚಿಕ್ಕಣ್ಣ, ಸಂತೋಷ್ ಮುಖಂಡರಾದ ನಂಜಯ್ಯ ಗ್ರಾಪಂ ಸದಸ್ಯ ಚಂದ್ರಶೇಖರ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net