

ಬಾಗಲಕೋಟೆ: ಈ ಸಾರಿ ಚುನಾವಣೆಯಲ್ಲಿ ತಮ್ಮ ಅಲ್ಲ, ತಿಮ್ಮ ಸೋಲುತ್ತಾನೆ ಅಂತ ಗುರುಗಳೊಬ್ಬರು ಭವಿಷ್ಯ ನುಡಿದಿದ್ದಾರೆ ಎಂದು ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಲೋಕಲ್ ಗುರುಗಳೊಬ್ಬರನ್ನು ಈಚೆಗೆ ಭೇಟಿಯಾಗಿದ್ದು, ತಮ್ಮ ಗೆಲ್ತಾನ ತಿಮ್ಮ ಸೋಲ್ತಾನ ಅಂದಿದ್ದಾರೆ ಎಂದು ಹೇಳುವ ಮೂಲಕ ಈಚೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬಾಗಲಕೋಟೆ ಮತಕ್ಷೇತ್ರದಲ್ಲಿ ವಿಷಯ ಬೇರೆಡೆ ತಿರುಗಿಸಲು ಸಚಿವ ಮುರುಗೇಶ ನಿರಾಣಿ ಅವರನ್ನು ಎಳೆದು ತರಲಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ಹೇಳಿಕೆ ನೀಡಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಿದ್ದಾರೆ. ಮುರುಗೇಶ ನಿರಾಣಿ ಸಣ್ಣತನದ ರಾಜಕೀಯ ಮಾಡಿಲ್ಲ. ಸುಮ್ಮನೇ ಅವರ ಬಗ್ಗೆ ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ. ಅವರು ಬಹಳ ಉತ್ತಮ ವ್ಯಕ್ತಿತ್ವದ ವ್ಯಕ್ತಿ ಎಂದು ಹೇಳಿದರು.
ನಾನು ಯಾರನ್ನು ಟೀಕೆ ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆದರು ಗುರಿಯಾಗಿಸಿದ್ದಾರೆ. ಬಾಗಲಕೋಟೆ ಮತಕ್ಷೇತ್ರದಲ್ಲಿ ಬದಲಾವಣೆ ಇದೆ. ಕಾರ್ಯಕರ್ತರ ಜೊತೆ ಕುಳಿತು ಮಾತನಾಡದವರು ಇಂದು ರಸ್ತೆ ಮೇಲೆ ನಿಂತು ಊಟ ಬಡಿಸುತ್ತಿದ್ದಾರೆ. ನಾವು ಸೈಲಂಟ್ ಆಗಿಲ್ಲ. ಗೊಂದಲದಲ್ಲಿ ಇಲ್ಲ. ತಪ್ಪು ಮಾಡಿಲ್ಲ. ರಾಜಿ ಆಗುವ ಪ್ರಶ್ನೆನೇ ಇಲ್ಲ. ವರಿಷ್ಠರ ಸೂಚನೆ ಮೆರೆಗೆ ಮಾತನಾಡುತ್ತಿಲ್ಲ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.
ಇನ್ನು ಬಿಜೆಪಿಯಿಂದ ಉಚ್ಛಾಟನೆಗೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಎಂಟು ದಿನ ಕಾಲಾವಕಾಶ ನೀಡಿ ಬಹಿರಂಗವಾಗಿ ಕಾರಣ ತಿಳಿಸುವಂತೆ ಕೇಳಲಾಗಿತ್ತು. ಆದರೇ ಎರಡು ತಿಂಗಳ ಗತಿಸಿದರು ಉತ್ತರ ನೀಡಿಲ್ಲ. ತನ್ಮೂಲಕ ಇದೊಂದು ಬೋಗಸ್ ಎನ್ನುವುದು ಕಂಡು ಬರುತ್ತಿದೆ. ಈ ವರೆಗೆ ಶೋಕಾಸ್ ನೋಟಿಸ್ ಆಗಲಿ, ಉಚ್ಛಾಟನೆ ಆದೇಶ ಪತ್ರವಾಗಲಿ ನನಗೆ ತಲುಪಿಲ್ಲ. ಅದಕ್ಕೆ ನಾನು ಉತ್ತರ ನೀಡುವ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದರು.