ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷಗಳ ಕಂಟ್ರೋಲ್

24M.D.R.1
Published on

ಮದ್ದೂರು: ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಹಾಗೂ ಸಿಬಿಐ ತನಿಖೆ ಸಂಸ್ಥೆಗಳಿರುವುದು ವಿರೋಧ ಪಕ್ಷಗಳನ್ನು ಕಂಟ್ರೋಲ್ ಮಾಡೋದಕ್ಕೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಕೊಪ್ಪ ಹೋಬಳಿಯ ಮೂಡ್ಯ ಹಾಗೂ ಕೊಪ್ಪ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಇಡಿ, ಐಟಿ ಹಾಗೂ ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನು ಅವರ ಕೆಲಸಗಳನ್ನು ಮಾಡಲು ಬಿಡುತ್ತಿಲ್ಲ. ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ಮಾಡಿಸುತ್ತಿರುವುದು ಹೊಸದಲ್ಲ. ಈ ತನಿಖಾ ಸಂಸ್ಥೆಗಳು ದುರುಪಯೋಗವಾಗುತ್ತಿದೆ ಎಂಬುದು ದೇಶಾದ್ಯಂತ ಜಗಜ್ಜಾಹೀರಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೂ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ನಾಯಕರ ಮನೆ, ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ಮಾಡಿಸಲಾಗಿದೆ. ಈ ತನಿಖಾ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ನಾಯಕರ ಕಾಣೋಲ್ಲ. ಈ ದ್ವೇಷ ರಾಜಕಾರಣ ಎಲ್ಲಿಯವರೆಗೆ ನಡೆಯುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀ ಧರ್ಮಸ್ಥಳದ ಪಾವಿತ್ರೃವನ್ನು ಎತ್ತಿ ಹಿಡಿಯುವ ಸಲುವಾಗಿ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರಬಂದಿದೆ ಎಂದರು.

ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಹಲವು ವರ್ಷಗಳಿಂದ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ. ಶ್ರೀ ಕ್ಷೇತ್ರದ ಮೇಲೆ ಇದ್ದಂತ ಕಳಂಕ ಮುಕ್ತವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು.

ಬಿಜೆಪಿ ಸರ್ಕಾರವಿದ್ದಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆರ್.ಅಶೋಕ್ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿದ್ದರು. ಆದರೆ, ಅವರ ಸರ್ಕಾರವಿದ್ದಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಕರಣವನ್ನು ಮುಕ್ತಾಯಗೊಳಿಸಬಹುದಿತ್ತು. ಅವರಿಗೆ ಬದ್ಧತೆ, ಕ್ಷೇತ್ರದ ಮೇಲೆ ಗೌರವವಿಲ್ಲ. ಈಗ ರಾಜ್ಯ ಸರ್ಕಾರ ಕ್ರಮ ತಗೆದುಕೊಳ್ಳಬೇಕು ಅಂತ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಮಾಡುತ್ತ ರಾಜ್ಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಿದೆ. ಸರ್ಕಾರದ ವಿರುದ್ಧ ಅಪಪ್ರಚಾರ ತರಲು ಯತ್ನಿಸಿದ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಅವರು ನೆರವೇರಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಲಾಗಿದೆ. ಆದರೆ, ಇದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ, ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವವರನ್ನು ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಪರಂಪರೆ ಈ ಹಿಂದಿನಿಂದ ನಡೆದು ಬಂದಿದೆ. ಖ್ಯಾತ ಸಾಹಿತಿಗಳಾದ ಕೆ.ಎಸ್.ನಿಸಾರ್ ಅಹಮದ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲಾಗಿದೆ. ಇಲ್ಲಿ ಜಾತಿ ಮುಖ್ಯವಲ್ಲ, ಸಾಧನೆ ಮುಖ್ಯ. ಇಂತಹ ಕಾರ್ಯಗಳಲ್ಲಿಯೂ ಜಾತಿ ತರುವುದು ಶೋಭೆಯಲ್ಲ ಎಂದರು.

ತಾಲೂಕಿನ ಕೊಪ್ಪ ಹೋಬಳಿ ಸಮಗ್ರ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಎರಡೇ ವರ್ಷದಲ್ಲಿ 150 ಕೋಟಿ ರೂ.ಹೆಚ್ಚಿನ ಅನುದಾವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ 500 ಕೋಟಿ ರೂ. ವಿಶೇಷ ಅನುದಾನ ತಂದು ಕೊಪ್ಪ ಹೋಬಳಿಯನ್ನು ಮಾದರಿ ಹೋಬಳಿಯನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೊಪ್ಪ ಗ್ರಾಪಂಯನ್ನು ಪಟ್ಟಣದ ಪಂಚಾಯಿತಿ ಮಾಡಬೇಕು ಎಂಬುದರ ಬಗ್ಗೆ ಹಲವು ದಿನಗಳಿಂದ ಬೇಡಿಕೆಯಿದ್ದು, ಕೊಪ್ಪ ಗ್ರಾಪಂಯಾಗೇ ಇರಬೇಕಾ ಅಥವಾ ಪಟ್ಟಣದ ಪಂಚಾಯಿತಿ ಮಾಡಬೇಕಾ ಎಂಬ ಬಗ್ಗೆ ಇನ್ನೊಮ್ಮೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾಪಂ ಮಾಜಿ ಉಪಾಧ್ಯಕ್ಷರಾದ ಬೆಕ್ಕಳಲೆ ರಘು, ರಾಮಚಂದ್ರು, ಮಾಜಿ ಸದಸ್ಯರಾದ ತೋಯಾಜಾಕ್ಷ, ಕೆ.ಆರ್.ಮಹೇಶ್, ಮುಖಂಡರಾದ ಮೂಡ್ಯ ಮಂಜು, ಹರೀಶ್, ಕುಮಾರ್, ಕುಮಾರ್ ಕೊಪ್ಪ, ಪರ್ವಿಜ್ ಅಹಮದ್, ವಿಜಯ್, ಶಿವಲಿಂಗಯ್ಯ, ಆನಂದ್, ಸಿ.ಎಂ.ಕ್ರಾಂತಿಸಿಂಹ, ಕರಿಯಪ್ಪ, ಶಿವರಾಮ್, ಸತೀಶ್, ಸುಧಮ್ಮಾ, ಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net