ತಡೆಗೋಡೆ ಕೆಲಸ ಎಚ್ಚರಿಕೆಯಿಂದ ಮಾಡಿ

19gkn1-a-
Published on

ಗೋಕರ್ಣ: ಸಮುದ್ರ ತೀರ ವಾಸಿಗಳ ರಕ್ಷಣೆಗಾಗಿ ಮಾಡಲಾಗುವ ಕೋಟ್ಯಂತರ ರೂ. ವೆಚ್ಚದ ತಡೆಗೋಡೆ ಕಾಮಗಾರಿ ಸಮುದ್ರದಲ್ಲಿ ತೇಲಿ ಹೋಗದಂತೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಮೀನುಗಾರ ಗ್ರಾಮ ಗಂಗೆಕೊಳ್ಳ ಮತ್ತು ದುಬ್ಬನಸಶಿಯಲ್ಲಿ 8 ಕೋಟಿ ರೂ. ವೆಚ್ಚದ ಸಮುದ್ರ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿಗೆ ಸಣ್ಣಸಣ್ಣ ಕಲ್ಲುಗಳನ್ನು ಬಳಸುವುದರಿಂದ ಅವು ಮಳೆಗಾಲದ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಕಾರಣ ತೆರೆಯ ಅಬ್ಬರಕ್ಕೆ ತೇಲಿ ಹೋಗದ ಭಾರಿ ಗಾತ್ರದ ಕಲ್ಲುಗಳನ್ನು ಮಾತ್ರ ಕಡ್ಡಾಯವಾಗಿ ಬಳಸಬೇಕು. ಕಾಮಗಾರಿಯ ವೇಳೆ ಇದಕ್ಕೆ ತಪ್ಪಿದಲ್ಲಿ ಸ್ಥಳೀಯರು ಕೂಡಲೆ ನನ್ನನ್ನು ಸಂರ್ಪಸಿ ಎಂದು ಶಾಸಕರು ತಿಳಿಸಿದರು.

ಅಕ್ರಮ ಉಸುಕು ಸಂಗ್ರಹ ನಿಲ್ಲಲಿ: ಇದೇ ವೇಳೆ ಗಂಗಾವಳಿ ತೀರದ ಅರಣ್ಯ ಮತ್ತು ಬಂದರು ಇಲಾಖೆಗೆ ಸೇರಿದ ಸ್ಥಳದಲ್ಲಿ ಅಕ್ರಮವಾಗಿ ಉಸುಕು ಸಂಗ್ರಹಿಸಲಾಗುತ್ತಿದ್ದು, ಇದರಿಂದ ಸಮುದ್ರ ಕೊರೆತದ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಸ್ಥಳದಲ್ಲಿದ್ದ ಪಿಎಸ್​ಐ ನವೀನ ನಾಯ್ಕ ಅವರಿಗೆ ಕೂಡಲೆ ಇದನ್ನು ನಿಲ್ಲಿಸುವ ಬಗ್ಗೆ ಮತ್ತು ಕಠಿಣ ಕ್ರಮಕ್ಕೆ ಮುಂದಾಗುವಂತೆ ಶಾಸಕರು ಸೂಚಿಸಿದರು.

ತಾಪಂ ಸದಸ್ಯರಾದ ರಾಜೇಶ ನಾಯಕ, ಮಹೇಶ ಶೆಟ್ಟಿ, ಬಂದರು ಇಲಾಖೆ ಇಂಜಿನಿಯರ್ ರಾಮದಾಸ ಆಚಾರಿ, ಗೋಕರ್ಣ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಗ್ರಾಪಂ ಸದಸ್ಯ ನಾಗರಾಜ ತಾಂಡೇಲ, ದಯಾನಂದ ಮೇಥಾ, ಬಿಜೆಪಿಯ ನಾಗರಾಜ ಹಿತ್ತಲಮಕ್ಕಿ, ಸುಬ್ಬು ಗೌಡ, ಈಶ್ವರ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net