ತಡಸ ಸರ್ಕಾರಿ ಶಾಲೆ ದತ್ತು ಸ್ವೀಕರಿಸಿದ ನಟ ಪ್ರಜ್ವಲ್

15byd1b
Published on

ಬ್ಯಾಡಗಿ: ‘ಸರ್ಕಾರಿ ಶಾಲೆಗಳನ್ನು ಉಳಿಸಿ’ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿ, ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದು ಚಿತ್ರನಟ ಪ್ರಜ್ವಲ್ ದೇವರಾಜ ಹೇಳಿದರು.

ತಾಲೂಕಿನ ತಡಸ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದರೂ, ಬಹುತೇಕ ಶಾಲೆಗಳು ದುಸ್ಥಿತಿಯಲ್ಲಿವೆ. ಸಾರ್ವಜನಿಕರು, ಸಂಘ, ಸಂಸ್ಥೆಗಳು ಹಾಗೂ ಉಳ್ಳವರು, ಸಮಾಜ ಸೇವಕರು ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕಿದೆ. ಗ್ರಾಮಗಳ ಶಾಲೆ, ಸರ್ಕಾರಿ ಶಾಲೆ ಉಳಿಸಿ ಆಂದೋಲನ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರ ಸಹಕಾರದ ಮೇರೆಗೆ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಶಿಕ್ಷಣ ಇಲಾಖೆಯಿಂದ ಒಡಂಬಡಿಕೆ ಮಾಡಿಕೊಂಡು ಯೋಜನೆ ರೂಪಿಸಲಾಗುವುದು ಎಂದರು.

ಸ್ಮಾರ್ಟ್ ಕ್ಲಾಸ್ ಕೊಠಡಿ: ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಸದರಿ ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದು, ಕಂಪ್ಯೂಟರ್, ಹೈಟೆಕ್ ಶೌಚಗೃಹ, ನೀರು ಶುದ್ಧೀಕರಿಸುವ ಘಟಕ, ಬೆಂಚ್​ಗಳು, ಅಧ್ಯಯನ ಸಾಮಗ್ರಿ ಸೇರಿ ಹಲವು ಮೂಲಸೌಲಭ್ಯ ಕಲ್ಪಿಸಬೇಕಿದೆ. ಸ್ಮಾರ್ಟ್​ಕ್ಲಾಸ್ ನಡೆಸಲು ಆಧುನಿಕ ಸೌಲಭ್ಯವುಳ್ಳ ಕೊಠಡಿ ನಿರ್ವಿುಸಲಾಗುವುದು. ಈಗಾಗಲೇ ಶಾಲೆಗೆ ಸುಣ್ಣಬಣ್ಣ ಹಚ್ಚಲು 60 ಸಾವಿರ ರೂ. ನೀಡಿದ್ದು, ಒಟ್ಟಾರೆ ಮಾದರಿ ಶಾಲೆ ಮಾಡಲು ಯತ್ನಿಸುತ್ತೇನೆ ಎಂದರು.

ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮನಿ, ಬಿಆರ್​ಸಿ ಎಸ್.ಎನ್. ರ್ಬಾ, ಎಸ್​ಡಿಎಂಸಿ ಅಧ್ಯಕ್ಷ ಕೇಶವ ಕಿತ್ತೂರು, ಗಿರಿಜವ್ವ ಸಿ, ವರ್ತಕ ಅಭಿಷೇಕ ಬೆಟಗೇರಿ, ಪ್ರಧಾನ ಶಿಕ್ಷಕಿ ಅಂಜನಾದೇವಿ ಕಿತ್ತೂರು, ಸರೋಜಾ ಕುಲಮಿ, ಲಲಿತ ದುಗ್ಗದ, ಹೊನ್ನಪ್ಪ ಸಣ್ಣರ್ಬಾ, ಚಂದ್ರಪ್ಪ ದೊಡ್ಡಮನಿ, ಹನುಮಂತಪ್ಪ ರ್ಬಾ, ಹೊನ್ನಪ್ಪ ಚಿನ್ನಿಕಟ್ಟಿ ಇದ್ದರು. ಸುರೇಶ ಕರಡೇರ, ಮಂಜುನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net