

ಅರಕಲಗೂಡು: ತಾಲೂಕಿನಲ್ಲಿ ತಂಬಾಕು ನಾಟಿ ಕಾರ್ಯ ನಡೆಸಲು ಮಳೆ ಅಭಾವದಿಂದಾಗಿ ರೈತರು ಕೈಕಟ್ಟಿ ಕೂರುವಂತಾಗಿದೆ.
ಪ್ರಮುಖ ವಾಣಿಜ್ಯ ಬೆಳೆ ತಂಬಾಕು ನಾಟಿ ಕೈಗೊಳ್ಳಲು ಈಗಾಗಲೇ ರೈತರು ಸಸಿಮಡಿ ಬೆಳೆಸಿದ್ದಾರೆ. ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಮಾತ್ರ ಜಮೀನಿಗೆ ನೀರುಣಿಸಿ ನಾಟಿ ಕಾರ್ಯ ನಡೆಸುತ್ತಿದ್ದಾರೆ. ಆದರೆ ಮಳೆಯಾಶ್ರಿತ ಜಮೀನಿಗೆ ವರುಣನ ಅವಕೃಪೆ ಬಾಧಿಸಿದೆ. ಯಾವಾಗ ಮಳೆ ಬರುವುದೋ ಎಂದು ಮುಗಿಲಿನತ್ತ ಮುಖ ಮಾಡಿದ್ದಾರೆ. ದುರಾದೃಷ್ಟವಶಾತ್ ಬಿರು ಬಿಸಿಲಿನ ತಾಪ ಹೆಚ್ಚಿದ್ದು ಮಳೆ ಕೊರತೆ ಅನ್ನದಾತರನ್ನು ಕಂಗೆಡಿಸಿದೆ.
ಕೆಲ ದಿನಗಳ ಹಿಂದೆ ಒಂದೆರಡು ಸಲ ಬಿದ್ದ ಮಳೆಗೆ ರೈತರು ಭೂಮಿಗೆ ಗೊಬ್ಬರ ಸಾಗಿಸಿ ಉಳುಮೆ ನಡೆಸಿದ್ದು ಹೊಗೆಸೊಪ್ಪು ನಾಟಿ ಕಾರ್ಯಕ್ಕೆ ಜಮೀನು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಭೂಮಿ ಉಳುಮೆ ಮಾಡಲೂ ಹದ ಮಳೆಯಾಗಿಲ್ಲ, ವರುಣ ಕೈಕೊಟ್ಟಿರುವುದರಿಂದ ಕಳೆದ ಎರಡು ತಿಂಗಳಿನಿಂದ ಬೆಳೆಸಿರುವ ಸಸಿ ಮಡಿಗಳು ಹಾಳಾಗಿ ಬೆಳೆ ಕೈಕೊಡುವ ಆತಂಕ ಸೃಷ್ಟಿಸಿದೆ. ಈ ನಡುವೆ ಸಾಕಷ್ಟು ರೈತರು ಸಸಿಗಳನ್ನು ಟ್ರೇಗಳಿಗೆ ನಾಟಿ ಮಾಡಿ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ, ಹಳ್ಳಿಮೈಸೂರು ಹೋಬಳಿ ಭಾಗದ ರೈತರ ಪ್ರಮುಖವಾಗಿ ವಾಣಿಜ್ಯ ಬೆಳೆಯಾಗಿ ತಂಬಾಕನ್ನು ಅವಲಂಬಿಸಿದ್ದಾರೆ. ನಾಟಿ ಮಾಡಲು ಮಳೆ ಕೈಕೊಟ್ಟಿರುವುದು ದೊಡ್ಡ ಹೊಡೆತ ನೀಡಿದಂತಾಗಿದೆ. ಕಳೆದ ವರ್ಷ ಅತಿವೃಷ್ಟಿ ಹೊಡೆತಕ್ಕೆ ತಂಬಾಕು ಇಳುವರಿ ಕುಂಠಿತಗೊಂಡಿತ್ತು, ಈ ಬಾರಿ ನಾಟಿ ಮಾಡಲು ಹದ ಮಳೆಯಾಗದೆ ಅನ್ನದಾತರು ಅನಾವೃಷ್ಟಿ ಸಂಕಷ್ಟ ಎದುರಿಸುವಂತಾಗಿದೆ.
ಹೊಲದಲ್ಲಿ ಬೆಳೆಸಿರುವ ಸಸಿ ಮಡಿಗಳಿಗೆ ನೀರು ಹಾಕಬೇಕು. ತಂಬಾಕು ನಾಟಿಗೆ ಬೆಳೆಸಿರುವ ಸಸಿ ಮಡಿಗಳನ್ನು ಕಾಪಾಡಿಕೊಳ್ಳುವುದೇ ಹರಸಾಹವಾಗಿದೆ. ಬೆಳೆಸಿರುವ ಸಸಿ ಮಡಿಗಳು ಒಣಗಿ ಹಾಳಾದರೆ ಮತ್ತೆ ಸಸಿಮಡಿ ಬೆಳೆಸಲು ಕಷ್ಟವಾಗಲಿದೆ. ಹೀಗಾಗಿ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ. ಮಳೆ ಇಲ್ಲದೆ ಈಗಾಗಲೇ ಸಸಿ ಮಡಿಗಳು ಬೆಳೆದಿದ್ದು ನಾಶವಾಗುವ ಭೀತಿ ಕಾಡುತ್ತಿದೆ.
ತಂಬಾಕು ಸಸಿ ಮಡಿಗಳನ್ನು ಕಾಪಾಡಿಕೊಳ್ಳಲು ರೈತರು ಹೆಚ್ಚು ಆಸಕ್ತಿ ವಹಿಸಬೇಕು. ಹೆಚ್ಚು ತಾಪಮಾನವಿರುವುದರಿಂದ ಸಸಿ ಮಡಿಗಳಿಗೆ ದಿನಕ್ಕೆ 2ರಿಂದ 3 ಬಾರಿ ನೀರು ಹಾಕಬೇಕು. ತಾಯಿ ಮಡಿಯಿಂದ ಟ್ರೇಗಳಿಗೆ ನಾಟಿ ಮಾಡಿದ ನಂತರ ಐದಾರು ದಿನಗಳ ಕಾಲ ನೆರಳಿನಲ್ಲಿ ಇಟ್ಟು ಅತಿಯಾದ ತಾಪಮಾನದಿಂದ ನಿಯಂತ್ರಿಸಬಹುದು. ನರ್ಸರಿಯಲ್ಲಿ ಹೆಚ್ಚು ಬೆಳವಣಿಗೆ ಆಗಿದ್ದರೆ ಅಂತಹ ಸಸಿಗಳ ತುದಿ ಭಾಗದ ಎಲೆಗಳನ್ನು ತೆಗೆದು ಸದೃಢಗೊಳಿಸಬೇಕು. ಮುಖ್ಯವಾಗಿ ಸಸಿ ಮಡಿಗಳಲ್ಲಿ ರೋಗದ ಹತೋಟಿಗೆ ಮುಂದಾಗಬೇಕು. ಸಸಿ ಮಡಿಯಲ್ಲಿ ಕೊಳೆರೋಗ, ಕರಿಕಡ್ಡಿ ರೋಗ ಕಾಣಿಸಿಕೊಂಡರೆ ಶಿಲೀಂಧ್ರ ನಾಶಕಗಳಾದ ರೆಡಿಮೈಡಲ್, ಕೊಸೈಡ್ ಸಿಂಪಡಣೆ ಮಾಡಬೇಕು. ಟ್ರೇ ಸಸಿಗಳನ್ನು ದ್ರವಜೈವಿಕ ಗೊಬ್ಬರದಲ್ಲಿ ಅದ್ದಿ ನಾಟಿ ಮಾಡುವುದರಿಂದ ಮುಖ್ಯ ಹೊಲದಲ್ಲಿ ಸೊರಗು ರೋಗ, ಕರಿಕಡ್ಡಿ ರೋಗ ಕಡಿಮೆಯಾಗಲಿದೆ ಎನ್ನುತ್ತಾರೆ ತಂಬಾಕು ಮಾರುಕಟ್ಟೆ ಅಧಿಕಾರಿಗಳು.