ತಂದೆ-ತಾಯಿ ಕುಟುಂಬದ ಜೋಡೆತ್ತು

4-pnp 2a
????????????????????????????????????
Published on

ಪಾಂಡವಪುರ: ತಂದೆ-ತಾಯಿ ಇಬ್ಬರು ಕುಟುಂಬದ ಜೋಡೆತ್ತುಗಳಂತೆ ದುಡಿಯುತ್ತಾರೆ. ಸಂಸಾರವೆಂಬ ಕೃಷಿ ಮಾಡಲು ಇಬ್ಬರ ಪಾತ್ರ ಮಹತ್ವದಾಗಿದ್ದು, ಯಾರದೂ ಹೆಚ್ಚುಗಾರಿಕೆ ಇರುವುದಿಲ್ಲ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಹಾಗೂ ಪಾಲಕರ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜಿಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಲ್ಲಿರುವ ಜಾಣ್ಮೆ ಪರೀಕ್ಷೆ ಮಾಡುವ ಉದ್ದೇಶದಿಂದ ಚಿಣ್ಣರ ಜಾಣರ ಜಗುಲಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಕುಟುಂಬದ ಯಜಮಾನರು ಅಪ್ಪನೋ-ಅಮ್ಮನೋ? ಎಂಬ ವಿಷಯದ ಮೇಲೆ ಚರ್ಚೆಯನ್ನಿಟ್ಟು, ಆ ಮೂಲಕ ಮಕ್ಕಳ ಪ್ರಜ್ಞಾವಂತಿಕೆ ಪರೀಕ್ಷಿಸುವ ಉತ್ತಮ ಪ್ರಯತ್ನ ಮಾಡಲಾಗುತ್ತಿದೆ. ಇದು ನಿಜಕ್ಕೂ ಉತ್ತಮ ಪರಿಕಲ್ಪನೆ. ಸಂಸಾರದಲ್ಲಿ ತಂದೆ-ತಾಯಿ ಇಬ್ಬರ ಪಾತ್ರ ಮಹತ್ವದ್ದಾಗಿದೆ. ಮಕ್ಕಳನ್ನು ಪಾಲನೆ ಮಾಡಿ ಅವರನ್ನು ವಿದ್ಯಾವಂತರನ್ನಾಗಿ ಬೆಳೆಸಿ ಸಮಾಜದಲ್ಲಿ ಅವರಿಗೆ ಉತ್ತಮ ಬದುಕು ಕಲ್ಪಿಸಿಸುವ ಮಹತ್ತರವಾದ ಜವಾಬ್ದಾರಿಯನ್ನು ಪಾಲಕರು ಹೊತ್ತಿದ್ದಾರೆ. ಮಕ್ಕಳಾದವರು ಪಾಲಕರ ಜವಾಬ್ದಾರಿ ಅರಿಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಉತ್ತಮ ಪರಿಸರದ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಶಾಲೆಯ ಸುತ್ತಲೂ ಕೃಷಿ ಚಟುವಟಿಕೆಗಳು ನಡೆಯುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ಕೃಷಿ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ. ಮಕ್ಕಳು ತಿನ್ನುವ ಆಹಾರವನ್ನು ವ್ಯರ್ಥಮಾಡಬಾರದು. ನಾವು ಸೇವಿಸುವ ಆಹಾರವನ್ನು ಗೌರವಿಸುವ ಕೆಲಸ ಮಾಡಬೇಕು. ಶಾಲೆಯಲ್ಲಿ ನಡೆದ ಪಾದಪೂಜೆ ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿದೆ ಎಂದು ಬಣ್ಣಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಠದ ಹಿರಿಯ ಶ್ರೀಗಳ ಸವಿನೆನಪಿಗಾಗಿ ಪ್ರತಿವರ್ಷ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಚಿಣ್ಣರ ಜಾಣರ ಜಗುಲಿ ಹಾಗೂ ಪಾದಪೂಜೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಓದುತ್ತಿರುವ ಯಾವ ವಿದ್ಯಾರ್ಥಿಗಳು ಸರ್ಕಾರಿ ನೌಕರರು, ಅಧಿಕಾರಿಗಳ ಮಕ್ಕಳಲ್ಲ. ಎಲ್ಲರೂ ರೈತಾಪಿ ಜನರ ಮಕ್ಕಳು. ಗ್ರಾಮೀಣ ಪ್ರದೇಶದ ರೈತರ ಮಕ್ಕಳಲ್ಲೂ ವಿಶೇಷವಾದ ಶಕ್ತಿ ಹಾಗೂ ಪ್ರತಿಭೆ ಇದೆ. ಅವುಗಳನ್ನು ಹೊರತೆಗೆಯುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಪಾಲಕರ ನಡುವೆ ಎಷ್ಟು ಅಂತರ, ಕಟ್ಟುಪಾಡುಗಳಿವೆ ಎಂಬುದು ನಮಗೆ ತಿಳಿದಿದೆ. ಅದನ್ನು ಹೋಗಲಾಡಿಸುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಲ್ಲಿ ಭಕ್ತಿ ಹಾಗೂ ಪೂಜ್ಯತೆಯ ಭಾವನೆ ಮೂಡಿಸುವುದರ ಜತೆಗೆ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮದಲ್ಲಿ ಸಂಸಾರದ ಯಜಮಾನರು ಅಪ್ಪನೋ? ಅಮ್ಮನೋ? ಎಂಬ ವಿಷಯದಡಿ ಮಕ್ಕಳು ಪರ-ವಿರೋಧ ಚರ್ಚಿಸಿದರು.

ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯರಾದ ಜ್ಯೋತಿ ಮಂಜು, ಸುಶೀಲಮ್ಮ, ಶ್ರೀನಿವಾಸ್, ಮಾಜಿ ಸದಸ್ಯ ಸಿ.ಡಿ.ಮಹದೇವು, ಪ್ರಾಂಶುಪಾಲ ಚಿದಂಬರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net