

ಬಾಗಲಕೋಟೆ: ಬಾಹ್ಯಾಕಾಶ ತಂತ್ರಜ್ಞಾನ ಬೆಳವಣಿಗೆಯಾದರೆ ಎಲ್ಲ ತಂತ್ರಜ್ಞಾನಗಳು ಸಹಜವಾಗಿ ಬೆಳವಣಿಗೆಯಾಗುತ್ತವೆ. ಭಾರತೀಯ ಇಸ್ರೋ ನಿರ್ಮಿತ ನೇವಿಗೇಷನ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆಗಳಿಂದ ನೈಸರ್ಗಿಕ ಪ್ರಕೋಪಗಳನ್ನು ಅಂದಾಜಿಸಿ ಉತ್ತಮ ನಿರ್ವಹಣೆ ಮಾಡಲಾಗುತ್ತದೆ ಎಂದು ಇಸ್ರೋ ಸಂಸ್ಥೆಯ ವಿಶ್ರಾಂತ ಹಿರಿಯ ವಿಜ್ಞಾನಿ ಸಿ.ಎ.ಪ್ರಭಾಕರ ಹೇಳಿದರು.
ವಿಶ್ವ ಬಾಹ್ಯಾಕಾಶ ಸಪ್ತಾಹ ನಗರದ ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಬಾಹ್ಯಾಕಾಶ ಮತ್ತು ಸುಸ್ಥಿರತೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂತಿ ಆಧಾರಿತ ಇಂಟರನೆಟ್ ತಲುಪದ ಸ್ಥಳಗಳಲ್ಲಿ, ರಕ್ಷಣಾವಲಯದ ಸೀಮೆಗಳಲ್ಲಿ, ನಾವಿಕ್ (ಭಾರತೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆ) ತಂತ್ರಜ್ಞಾನ ಬಳಸಿ ಪರಿಣಾಮಕಾರಿ ಕೆಲಸ ಮಾಡಲಾಗುತ್ತಿದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಸಾಕಷ್ಟು ಅವಕಾಶಗಳಿವೆ. ಯಾವುದೇ ವಿಷಯ ತೆಗೆದುಕೊಂಡರು ವಿದ್ಯಾರ್ಥಿಗಳು ಉತ್ಕೃಷ್ಟತೆಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದ ಅವರು, ಇಸ್ರೋ ವಿಜ್ಞಾನಿಗಳು ಕಡಿಮೆ ವೆಚ್ಚದ ಉನ್ನತ ತಂತ್ರಜ್ಞಾನದ ಸೆಟಲೈಟ್ ನಿರ್ಮಾಣದಲ್ಲಿ ಬಹಳ ಚಾಣಾಕ್ಷರು ಎಂದರು.
ಯುಆರ್ ರಾವ್ ಸೆಟಲೈಟ್ ಕೇಂದ್ರ ತಂಡದ ಮುಖ್ಯಸ್ಥ ರಾಜೀವ ಬಾಡಗಂಡಿ ಮಾತನಾಡಿ, ಇಂದು ಹಿಟ್ಟು, ಬಟ್ಟೆಯಂತೆ ಬ್ರಾಡ್‌ಬ್ಯಾಂಡ್ ಅವಶ್ಯಕತೆಯಾಗಿದೆ. ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಇಸ್ರೋ ನಿರ್ಮಿತ ಸೆಟಲೈಟ್‌ಗಳ ಕುರಿತು ಇತಿಹಾಸದೊಂದಿಗೆ ಪ್ರಚಲಿತ ವಿದ್ಯಮಾನ ಕುರಿತು ಸಮಗ್ರ ಮಾಹಿತಿ ನೀಡಿದರು.
ಬಿವಿವಿ ಸಂಘದ ಬಿ.ಎಚ್.ಅರ್.ಡಿ. ಸಂಸ್ಥೆಯ ನಿರ್ದೇಶಕ ಎಸ್.ಆರ್.ಮನಹಳ್ಳಿ, ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ.ಆರ್.ಎನ್.ಹೆರಕಲ್, ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಇಂಜಗನೇರಿ, ಇಸ್ರೋ ವಿಜ್ಞಾನಿಗಳಾದ ರಾಜೀವ್ ಆರ್. ಬಾಡಗಂಡಿ, ವಿಠ್ಠಲ ಮೇತ್ರಿ, ಡಾ.ಶಾಮರಾವ್, ವಿಶ್ವನಾಥ ತಿರ್ಲಾಪುರ, ಉಮಾಕಾಂತ್, ಸಂಜಯ ಪಾವಲೆ ಉಪಸ್ಥಿತರಿದ್ದರು. ಡಾ. ಮಮತಾ ಸತರಡ್ಡಿ ನಿರೂಪಿಸಿದರು. ಅಂಜನಾ ಉಮರ್ಜಿ ಮತ್ತು ಸಂಗಡಿಗರ ಪ್ರಾರ್ಥಿಸಿದರು. ಡಾ.ಪಿ.ಎನ್.ಕುಲಕರ್ಣಿ ವಂದಿಸಿದರು.