

ಸುಭಾಸ ಧೂಪದಹೊಂಡ ಕಾರವಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಗ ಕೃಷಿ ಜಮೀನಿನ ಆಸ್ತಿಗಳ ಡ್ರೋನ್ ಸರ್ವೆಕ್ಷಣೆ ನಡೆಸಲು ಮುಂದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾಮಿತ್ವ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲು ತಯಾರಿ ನಡೆಸಿದೆ.
ಪ್ರತಿ ತಾಲೂಕಿಗೆ 8ರಂತೆ (ದಾಂಡೇಲಿಯ 4) ಜಿಲ್ಲೆಯ ಒಟ್ಟು 92 ಗ್ರಾಪಂಗಳ 526 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಇಲ್ಲಿನ ರೈತರ ಆಸ್ತಿಗಳನ್ನು ಡ್ರೋನ್ ಮೂಲಕ ಸರ್ವೆಕ್ಷಣೆ ನಡೆಸಿ ಗಡಿ ಗುರುತಿಸುವ ಕಾರ್ಯಕ್ಕೆ ಮಳೆಗಾಲ ಮುಗಿಯುತ್ತಿದ್ದಂತೆ ಚಾಲನೆ ದೊರೆಯಲಿದೆ.
ಏನಿದು ಸ್ವಾಮಿತ್ವ ಯೋಜನೆ?: ಕಳೆದ ಏಪ್ರಿಲ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಯನ್ನು ಘೊಷಿಸಿದ್ದಾರೆ. ಗ್ರಾಮೀಣ ಭಾಗದ ಆಸ್ತಿಗಳ ಸರ್ವೆ ಮಾಡಿ ಗಡಿ ಗುರುತಿಸುವ ಮೂಲಕ ರೈತರ ಆಸ್ತಿ ಕಲಹ ಬಗೆಹರಿಸಬೇಕು. ಈ ಮೂಲಕ ಸಾಲ, ಸರ್ಕಾರಿ ಸೌಲಭ್ಯ ಸುಲಭವಾಗಿ ರೈತರಿಗೆ ದೊರಕಿಸಿಕೊಡಬೇಕೆಂಬ ಉದ್ದೇಶದ ಯೋೕಜನೆ ಇದಾಗಿದೆ. ದೇಶದ 6 ರಾಜ್ಯಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕರ್ನಾಟಕವೂ ಒಂದು. ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಯೋಜನೆಯನ್ನು ಈ ವರ್ಷ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಉತ್ತರ ಕನ್ನಡವೂ ಸೇರಿದೆ.
ಸರ್ವೆ ಕಾರ್ಯ ಹೇಗೆ?: ಭಾರತೀಯ ಸರ್ವೆಕ್ಷಣಾ ಇಲಾಖೆಯ ಮಾರ್ಗದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂ ದಾಖಲೆಗಳ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಗ್ರಾಮೀಣ ಭಾಗದ ಜನರಲ್ಲಿ ಯೋಜನೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಂತರ ಜಮೀನಿನ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪಡೆದು ಭೂ ದಾಖಲೆಗಳ ಇಲಾಖೆ ಸರ್ವೆಯರ್ಗಳು ಮಾಲೀಕರ ಎದುರು ಸುಣ್ಣದಿಂದ ಗಡಿ ಗುರುತು ಮಾಡಲಿದ್ದಾರೆ. ಡ್ರೋನ್ ಮೂಲಕ ಆಸ್ತಿಯ ಚಿತ್ರ ತೆಗೆದು, ಜಿಪಿಎಸ್ ಆಧಾರದ ಮೇಲೆ ಸೂಪರ್ ಇಂಪೋಸ್ ಮಾಡಿ ಜಮೀನಿನ ಡಿಜಿಟಲ್ ನಕ್ಷೆ ತಯಾರಿಸಲಾಗುತ್ತದೆ. ಇದನ್ನು ಆಧರಿಸಿ ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಮಾಡಿ ಆಸ್ತಿಗಳನ್ನು ಅನುಮೋದಿಸಲಾಗುತ್ತದೆ. ದಾಖಲಾತಿ ಪ್ರಕ್ರಿಯೆ ಮುಗಿದ ಬಳಿಕ ಜಮೀನಿನ ಹಕ್ಕು ಪತ್ರವನ್ನು ಉಚಿತವಾಗಿ ನೀಡಲಾಗುತ್ತದೆ.
ಉ.ಕ ದಲ್ಲಿ ದೊಡ್ಡ ಸವಾಲು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿರುವ ಗ್ರಾಮಗಳ ಕೃಷಿಯೇತರ ಆಸ್ತಿಗಳಿಗೆ ಪ್ರಮಾಣೀಕರಣ ನೀಡುವ ತಂತ್ರಾಂಶ ‘ಇ- ಸ್ವತ್ತು’ ಜಿಲ್ಲೆಯಲ್ಲಿ ದೊಡ್ಡ ಸಮಸ್ಯೆ ಹುಟ್ಟು ಹಾಕಿದೆ. ಜಿಲ್ಲೆಯ ವಿವಿಧ ಭೂ ದಾಖಲೆಯಲ್ಲಿ ಕಂಡುಬರುವ ‘ಅರಣ್ಯ ಭೂಮಿ’ ಎಂಬ ಮೊಹರು ಹಾಗೂ ಕರಾವಳಿಯಲ್ಲಿ ಸಿಆರ್ರೆಡ್ ಕಾಯ್ದೆ ಯಿಂದಾಗುವ ತೊಡಕು ಹಾಗೂ ಅತಿ ಚಿಕ್ಕ ಹಿಡುವಳಿಗಳು ಇ ಸ್ವತ್ತು ಯಶಸ್ಸಿಗೆ ಅಡ್ಡಗಾಲಾಗಿವೆ. ಈಗ ಜಾರಿ ಮಾಡಲಾಗುತ್ತಿರುವ ಸ್ವಾಮಿತ್ವ ಯೋಜನೆಗೂ ಇದೇ ಅಂಶಗಳು ದೊಡ್ಡ ಸವಾಲಾಗಲಿವೆ ಎಂಬುದು ಅನುಭವಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸ್ವಾಮಿತ್ವ ಯೋಜನೆ ಜಾರಿಗೆ ಪ್ರಾಥಮಿಕ ತಯಾರಿ ಕೈಗೊಂಡಿದ್ದೇವೆ. ಮಳೆ ಕಡಿಮೆಯಾಗುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಯೋಜನೆ ಜಾರಿಗೊಳಿಸಲಾಗುವುದು. | ಎಂ. ರೋಶನ್ ಜಿಪಂ ಸಿಇಒ
ಸಂಪೂರ್ಣ ಆಸ್ತಿ ಸರ್ವೆಗೆ ಹಿನ್ನಡೆ: ಜಿಲ್ಲೆಯ ಸಂಪೂರ್ಣ ಆಸ್ತಿಗಳನ್ನು ಸರ್ವೆ ಮಾಡಿ, ಡಿಜಿಟಲ್ ನಕ್ಷೆ ತಯಾರಿಸಲು ರಾಜ್ಯ ಸರ್ಕಾರವು ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆ ಸಹಯೋಗದಲ್ಲಿ 2019ರಲ್ಲಿ ಸಿದ್ಧಪಡಿಸಿದ್ದ ಡ್ರೋಣ್ ಸರ್ವೆ ಕಾರ್ಯ ನನೆಗುದಿಗೆ ಬಿದ್ದಿದೆ. ಇದರ ಬದಲಾಗಿ ಈಗ ಕೃಷಿ ಜಮೀನು ಸಮೀಕ್ಷೆ ಮಾಡುವ ಯೋಜನೆ ಮುನ್ನೆಲೆಗೆ ಬಂದಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಿದೆ.