

ಮುಂಡಗೋಡ: ಶಿಗ್ಗಾಂವಿ ತಾಲೂಕಿನಿಂದ ಕಾಲುವೆ ಮೂಲಕ ಹರಿದು ಬರುವ ನೀರು ತಾಲೂಕಿನ ಸನವಳ್ಳಿ ಡ್ಯಾಮ್ ಸೇರುವಂತೆ ಬಸವನಕಟ್ಟಿ ಹತ್ತಿರ ಚೆಕ್ಡ್ಯಾಮ್ ನಿರ್ವಿುಸಲಾಗಿದೆ. ಇಲ್ಲಿ ನೀರು ಸಂಗ್ರಹವಾದ ಬಳಿಕ ಹೆಚ್ಚುವರಿ ನೀರು ಕಾಲುವೆ ಮೂಲಕ ಹರಿದು ತಾಲೂಕಿನ ಸನವಳ್ಳಿ ಡ್ಯಾಮ್ ಸೇರಬೇಕು. ಆದರೆ, ಕಾಲುವೆಯ ಒಡ್ಡು ಒಡೆದು ಡ್ಯಾಮ್ ಸೇರುವ ಮಳೆ ನೀರು ಅರಣ್ಯದ ಮೂಲಕ ಹರಿದು ಪೋಲಾಗುತ್ತಿದೆ. ಇದು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯ್ಕೆ ಹಿಡಿದ ಕೈಗನ್ನಡಿ ಎಂಬುದು ಸ್ಥಳೀಯ ರೈತರ ಆರೋಪ.
ಕಳೆದ ವರ್ಷ ಸನವಳ್ಳಿ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಜಲಾಶಯದ ಕಾಲುವೆಗಳನ್ನು ಒಂದು ವಾರದೊಳಗೆ ದುರಸ್ತಿ ಮಾಡಿ ಮಳೆ ನೀರು ಡ್ಯಾಮ್ೆ ಸೇರುವಂತೆ ಮಾಡಬೇಕು. ಇಲ್ಲದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆಗ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ತಕ್ಕ ಮಟ್ಟಿಗೆ ದುರಸ್ತಿ ಮಾಡಿಸಿ ಕೈ ತೊಳೆದುಕೊಂಡಿದ್ದರು.
ನಂತರ 2-3 ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಲುವೆ ಮೂಲಕ ಹರಿದು ಬಂದ ಮಳೆ ನೀರು, ಒಡ್ಡು ಒಡೆದ ಪರಿಣಾಮ ಮತ್ತೆ ಅರಣ್ಯದ ಪಾಲಾಗಿ ಪೋಲಾಯಿತು. ಇದಾದ ನಂತರವೂ ಸಾವಿರಾರು ರೂ. ಖರ್ಚು ಮಾಡಿ ಕಾಲುವೆ ದುರಸ್ತಿ ಕಳಪೆ ಕಾಮಗಾರಿ ಮಾಡಿಸಲಾಯಿತಾದರೂ ಮತ್ತೆ ಕಾಲುವೆ ಒಡ್ಡು ಒಡೆದು ನೀರು ಅರಣ್ಯಕ್ಕೆ ಹರಿದು ಹೋಗುತ್ತಿದೆ.
ಪ್ರತಿ ವರ್ಷ ತಾಲೂಕಿನ ಕಾಲುವೆಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಇಲ್ಲಿನ ಸಣ್ಣ ನೀರಾವರಿ ಇಲಾಖೆ ಉಪವಿಭಾಗದ ಅಧಿಕಾರಿಗಳು ಸಮರ್ಪಕವಾಗಿ ಅನುದಾನದ ಬಳಕೆ ಮಾಡುತ್ತಿಲ್ಲ.
ಕಳೆದ ವರ್ಷ ಡ್ಯಾಮ್ೆ ಬರುವ ನೀರು ಪೋಲಾಗುತ್ತಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಎಇಇಗೆ ಹತ್ತಾರು ಬಾರಿ ತಿಳಿಸಿದ ನಂತರ ಕಾಲುವೆ ದುರಸ್ತಿ ಮಾಡಿಸಿದ್ದರು. ಕಳಪೆ ಕಾಮಗಾರಿಯಿಂದ ಮತ್ತೆ ಕಾಲುವೆ ಒಡ್ಡು ಒಡೆದಿದೆ. ಪ್ರತಿ ವರ್ಷ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸನವಳ್ಳಿ ಜಲಾಶಯದ ನೀರನ್ನು ಪಟ್ಟಣದ ಜನರು ಕುಡಿಯಲು ಉಪಯೋಗಿಸುತ್ತಾರೆ. ಬೇಡ್ತಿ ಹಳ್ಳದಿಂದ ತಾಲೂಕಿನ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಯಡಿ ಈ ಜಲಾಯಶಕ್ಕೆ ನೀರು ತುಂಬಿಸುವುದು ಬೇಡ. ಜಲಾಶಯಕ್ಕೆ ಹರಿದು ಬರುವ ನೀರನ್ನು ಶೇಖರಿಸುವ ಜವಾಬ್ದಾರಿ ಪಪಂ ಮೇಲಿದ್ದು, ಅದು ಹೆಚ್ಚಿನ ಮುತುವರ್ಜಿ ವಹಿಸಬೇಕು.| ನಾಗರಾಜ ಗುಬ್ಬಕ್ಕನವರಸನವಳ್ಳಿ ಗ್ರಾಮಸ್ಥಕಾಲುವೆ ಒಡ್ಡನ್ನು ಎರಡು ಬಾರಿ ದುರಸ್ತಿ ಮಾಡಿಸಿದ್ದೇವೆ. ಸ್ಥಳಕ್ಕೆ ನಾಳೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಲಾಕ್ಡೌನ್ ಕಾರಣದಿಂದ ಸ್ವಲ್ಪ ಸಮಸ್ಯೆಯಾಗಿದೆ.| ಗಿರೀಶ ಜೋಶಿಎಇಇ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ