ಡೇರಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ

Published on

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಾರ್ಯನಿರ್ವಹಣಾಧಿಕಾರಿಯಿಂದ ದೂರು | ಉತ್ಪಾದಕರಿಗೆ ಬಟವಾಡೆ ಮಾಡಲು ಸಮಸ್ಯೆ

ಚಿಂತಾಮಣಿ: ತಾಲೂಕಿನ ಚೌಡದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಂಘದಲ್ಲಿ ತೊಂದರೆ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಾಂಜಿನಪ್ಪ ಗ್ರಾಮಾಂತರ ಠಾಣೆಯಲ್ಲಿ ಜೂ.25ರಂದು ದೂರು ದಾಖಲಿಸಿದ್ದಾರೆ.

ಸಂಘದಲ್ಲಿ 33 ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದೇನೆ. ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಜಂಟಿಯಾಗಿ ಸಂಘದ ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೇ ಸಂಘದ ಕಾರ್ಯಕಾರಿ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ವಿವಾದವಿದ್ದು, ಸಹಕಾರ ಸಂಘ ಸಹಾಯಕ ನಿಬಂಧಕರ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ 2024ರ ಡಿ.20ರಿಂದ 2025ರ ಜೂ.24ರವರೆಗೆ ಸಂಘದ ಉಪಾಧ್ಯಕ್ಷೆ , ಇಬ್ಬರು ನಿರ್ದೇಶಕರು ಡೇರಿ ನಕಲಿ ಸೀಲ್ ಮತ್ತು ಲೆಟರ್‌ಹೆಡ್ ಹಾಗೂ ಕಾರ್ಯಕಾರಿ ಮಂಡಳಿಯ ಅನಧಿಕೃತ ನಡಾವಳಿ ಪುಸ್ತಕವನ್ನು ಕಾನೂನುಬಾಹಿರವಾಗಿ ಬಳಸಿಕೊಂಡು ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹಾರ ನಡೆಸಲು ನೀಡಿದ್ದಾರೆ. ಸಂಘದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತೊಂದರೆ ಮಾಡಿದ್ದಾರೆ. ಇದರಿಂದ ಉತ್ಪಾದಕರಿಗೆ ಬಟವಾಡೆ ಮಾಡಲು ತೊಂದರೆಯಾಗಿದೆ. ಆದ್ದರಿಂದ ಕಾನೂನುಕ್ರಮ ಜರುಗಿಸುವಂತೆ ದೂರಿನಲ್ಲಿ ರಾಮಾಂಜಿನಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net