

ಬಾಗಲಕೋಟೆ: ಡೆಂಘೆ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಿ, ಜಿಲ್ಲೆಯಲ್ಲಿ ಒಂದೇ ಒಂದು ಸಾವು ಸಂಭವಿಸದಂತೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಸರ್ವೇಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೂ ಡೆಂಘೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳಿಂದ ಅಗತ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರ ಸಮನ್ವಯದೊಂದಿಗೆ ಡೆಂಘೆ ನಿಯಂತ್ರಣ ತರಬೇಕು ಎಂದರು.
ಇಲ್ಲಿಯವರೆಗೆ ಬಾಗಲಕೋಟೆ ನಗರ ಒಂದರಲ್ಲೇ ೧೯ ಪ್ರಕರಣಗಳು ಖಚಿತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ೫೩ ಪ್ರಕರಣಗಳು ಕಂಡು ಬಂದಿವೆ. ಈ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಔಷಧಿ ದಾಸ್ತಾನು ಕೊರತೆಯಾಗಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ತೋರುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದ್ದು, ಅದನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಅನುಷ್ಠಾನಕ್ಕೆ ತರಬೇಕು. ಆರೋಗ್ಯ ಇಲಾಖೆ ವೈದ್ಯಾಧಿಕಾರಿಯಾಗಲಿ ಅಥವಾ ಸಿಬ್ಬಂದಿ ಯಾವುದೇ ಕಾರಣಕ್ಕೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ್ ಮಾತನಾಡಿ, ರೋಗವಾಹಕಗಳು ಬರುವುದಕ್ಕಿಂತ ಮುಂಚೆ ಅವು ಬರದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮುಖ್ಯವಾಗಿ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜನ ಜಾಗೃತಿಯಾಗಬೇಕು ಎಂದರು.
ಅಂಗನವಾಡಿ ಮತ್ತು ಶಾಲಾ ಆವರಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕೊಳಚೆ ನೀರು ನಿಲ್ಲದಂತೆ ಒಟ್ಟಾರೆಯಾಗಿ ಶಾಲೆ ಅಂಗನವಾಡಿಗಳನ್ನು ಸ್ವಚ್ಚವಾಗಿಡಬೇಕು. ಮಕ್ಕಳ ಆರೋಗ್ಯದ ಮೇಲೆ ಬಹು ಬೇಗ ಪರಿಣಾಮ ಬೀರುವ ಸಂಭವವಿರುತ್ತದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಶೇ.೧೦೦ ಲಸಿಕಾಕರಣ ಆಗಬೇಕು. ಸೆಪ್ಟೆಂಬರ ಮಾಹೆ ವರೆಗೂ ಡೆಂಘೆ ಹರಡುವ ಸಾಧ್ಯತೆ ಇರುವದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜಯಶ್ರೀ ಎಮ್ಮಿ ಮಾತನಾಡಿ, ಇಲ್ಲಿಯವರೆಗೂ ಒಂದೂ ಚಿಕನ್ ಗುನ್ಯಾ ಪ್ರಕರಣ ಖಚಿತಪಟ್ಟಿರುವದಿಲ್ಲ. ಆದರೆ ೨೬೦ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ೨೫೯ ರಕ್ತ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಎಲ್ಲಾ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಽಕಾರಿಗಳು ಇದ್ದರು.