ಡಿಸೆಂಬರ್‌ನಲ್ಲಿ ಕರಾವಳಿ ಉತ್ಸವ- ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

kotasrinivaspoojari-1566355385
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಡಿಸೆಂಬರ್‌ನಲ್ಲಿ ಕರಾವಳಿ ಉತ್ಸವ ಆಚರಿಸಲು ಯೋಜಿಸಲಾಗಿದ್ದು, ಶೀಘ್ರ ಸಭೆ ನಡೆಸಿ ನಿರ್ಣಯಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರೊನಾ ಕಾರಣದಿಂದ ಕೆಲ ವರ್ಷಗಳಿಂದ ಕರಾವಳಿ ಉತ್ಸವ ನಡೆದಿರಲಿಲ್ಲ , ಜನರ ಬೇಡಿಕೆಯಂತೆ ಉತ್ಸವ ನಡೆಸುವ ಬಗ್ಗೆ ಚರ್ಚಿಸಿದ್ದೇವೆ ಎಂದರು.
21 ರಂದು ತರಬೇತಿ ಶಾಲೆ ಉದ್ಘಾಟನೆ:
ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿ ಮಣಿದ ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ತರಬೇತಿ ಶಾಲೆಯನ್ನು ಹಿಂದುಳಿದ ವರ್ಗಗಳ ಇಲಾಖೆಯಿಂದ ಪ್ರಾರಂಭಿಸಲು ಈಗಾಗಲೇ ಆದೇಶವಾಗಿದೆ. ಜಿಲ್ಲೆಯ ಯುವಕರಿಗೆ ಸೈನ್ಯ ಸೇರಲು ತರಬೇತಿ ನೀಡುವ ಸಲುವಾಗಿ ಈ ಶಾಲೆ ತೆರೆಯಲಾಗುತ್ತಿದೆ. 500 ಕ್ಕೂ ಹೆಚ್ಚು ಜನ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದು, ಪ್ರಾಥಮಿಕ ಹಂತದಲ್ಲಿ 125 ಜನರನ್ನು ಆಯ್ಕೆ ಮಾಡಲಾಗಿದೆ.
4 ತಿಂಗಳ ಊಟ, ವಸತಿ, ತರಬೇತಿ ಸಂಪೂರ್ಣ ಉಚಿತವಾಗಿದ್ದು, ಮಾಜಾಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್‌ನಲ್ಲಿ ತಾತ್ಕಾಲಿಕವಾಗಿ ಶಾಲೆ ತೆರೆಯಲಾಗುತ್ತಿದೆ. ನವೆಂಬರ್ 21 ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತರಬೇತಿ ಶಾಲೆಯನ್ನು ಉದ್ಘಾಟಿಸುವರು ಎಂದರು.
50 ಸಾವಿರ ಲಸಿಕೆ:
ಜಿಲ್ಲೆಯಲ್ಲಿ 350 ಕ್ಕೂ ಅಽಕ ಜಾನುವಾರುಗಳಿಗೆ ಗಂಟು ಬೇನೆ ಕಾಣಿಸಿಕೊಂಡಿದ್ದು, 14 ಜಾನುವಾರುಗಳು ಮೃತಪಟ್ಟಿವೆ. ಅದನ್ನು ನಿಯಂತ್ರಿಸಲು ಸರ್ಕಾರ 50 ಸಾವಿರ ಲಸಿಕೆಯನ್ನು ಒದಗಿಸುತ್ತಿದೆ. ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ಇದ್ದು, ಹೊರ ಗುತ್ತಿಗೆಯ ಮೂಲಕ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು. ಶೀಘ್ರದಲ್ಲಿ ಹಳಿಯಾಳದಲ್ಲಿ ಗೋ ಶಾಲೆ ತೆರೆಯಲಾಗುವುದು. ನಂತರ ಭಟ್ಕಳ, ಕಾರವಾರ, ಶಿರಸಿ ತಾಲೂಕುಗಳಲ್ಲಿ ತಾಲೂಕು ಮಟ್ಟದ ಗೋ ಶಾಲೆ ತೆರೆಯಲಾಗುವುದು ಎಂದರು.
ಅರ್ಜಿ ಸಲ್ಲಿಸಿದರೆ ಮಾಸಾಶನ:
ದಕ್ಷಿಣ ಕನ್ನಡದ ದೈವ ನರ್ತಕರಿಗೆ ಮಾಶಾಸನ ಒದಗಿಸಲಾಗಿದೆ. ಅದರಂತೆ ಉತ್ತರ ಕನ್ನಡದಲ್ಲಿ ಬಂಡಿ ಹಬ್ಬದಲ್ಲಿ ಕಳಶ ಹೊರುವವರಿಗೆ ಸೌಲಭ್ಯ ಕಲ್ಪಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಪೂಜಾರಿ, ಭೂತಕೋಲದ ಸ್ವರೂಪದಲ್ಲಿ ವಿವಿಧ ಜಿಲ್ಲೆಗಳಲ್ಲಿ ಇರುವ ಆಚರಣೆಗಳಲ್ಲಿ ಪಾಲ್ಗೊಳ್ಳುವ ದೈವ ನರ್ತಕರಿಗೂ ಸರ್ಕಾರ ಮಾಶಾಸನ ನೀಡಲು ಬದ್ಧವಾಗಿದೆ. ಅರ್ಜಿ ಸಲ್ಲಿಸಿದಲ್ಲಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಅವುಗಳನ್ನು ಜಾನಪದ ಕಲೆ ಎಂದು ಪರಿಗಣಿಸಿ ಅವಿಗೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net