ಡಿಸಿ ಕಚೇರಿ ಎದುರು ಶವದೊಂದಿಗೆ ಪ್ರತಿಭಟನೆ

bkt-23-6a
ಬಾಗಲಕೋಟೆ ಜಿಲ್ಲಾಡಳಿತ ಭವನ ಆವರಣದಲ್ಲಿ ಮೃತ ಶಿಕ್ಷಕ ಶವ ಇರುವ ಅಂಬುಲೆನ್ಸ್.
Published on

ಬಾಗಲಕೋಟೆ: ಹಳೇ ಪಿಂಚಣಿ ವ್ಯವಸ್ಥೆ ಸರ್ಕಾರ ಜಾರಿಗೊಳಿಸುತ್ತಿಲ್ಲ ಅಂತ ಮನನೊಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಶವ ಅಂಬುಲೆನ್ಸ್ನಲ್ಲಿ ಇಟ್ಟುಕೊಂಡು ಇಲ್ಲಿನ ಜಿಲ್ಲಾಡಳಿತ ಭವನ ಎದುರು ಗುರುವಾರ ಪತ್ನಿ, ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಶಂಕ್ರಪ್ಪ ಬೋರಡ್ಡಿ(೪೫) ಮೃತ ಶಿಕ್ಷಕ. ಈತ ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿ. ರಾಯಚೂರು ಜಿಲ್ಲೆಯ ಸಿಂಧನೂರು ಭಾಗದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ೧೫೦ ದಿನಗಳಿಂದ ಬೆಂಗಳೂರಿನಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಅಂತ ನೌಕರರು ಹೋರಾಟ ನಡೆಸುತ್ತಿದ್ದರು. ಸರ್ಕಾರ ಸ್ಪಂದಿಸಿದ ಕಾರಣ ಬುಧವಾರ ಮಧ್ಯಾಹ್ನ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದರು. ಗುರುವಾರ ಬೆಳಗ್ಗೆ ಆತ ಶವ ತಂದು ಪತ್ನಿ ಲಕ್ಷ್ಮೀ
ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಇನ್ನು ಮೃತ ಶಿಕ್ಷಕ ಶಂಕ್ರಪ್ಪ ಕಳೆದ ಮಂಗಳವಾರ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಅನುದಾನಿತ ಶಾಲಾ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಮರಳಿ ಮನೆಗೆ ಬರುವ ಬದಲು ರೈಲು ಹಳಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತಲುಪುವದರ ಒಳಗಾಗಿ ಮೆಜೆಸ್ಟಿಕ ಪೊಲೀಸರು ಶವ ಪರೀಕ್ಷೆ ಕಾರ್ಯ ಮಾಡಿ ಮುಗಿಸಿಬಿಟ್ಟಿದ್ದಾರೆ ಅಂತ ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತ ಶಿಕ್ಷಕನ ಕುಟುಂಬಸ್ಥರು, ಕುಟುಂಬ ಸದಸ್ಯರಿಲ್ಲದೇ ಶವ ಪರೀಕ್ಷೆ ಯಾಕೆ ಮಾಡಿದ್ದೀರಿ ಎಂದು ಪೊಲೀಸರ ಜೊತೆ ವಾಗ್ವಾದ ಮಾಡಿ ಅಂಬುಲೆನ್ಸ ವಾಹನದಲ್ಲಿ ಮೃತ ಶಂಕ್ರಪ್ಪ ಅವರ ಶವ ತಂದು, ಬಾಗಲಕೋಟೆ ಜಿಲ್ಲಾಡಳಿತ ಆವರಣದಲ್ಲಿ ಇಡಲು ಮುಂದಾಗಿದ್ದರು.

ನಂತರ ಬಾಗಲಕೋಟೆ ಪೊಲೀಸರ ಮನವೊಲಿಕೆಯಿಂದ ಮೃತ ಶಿಕ್ಷಕರ ಸಂಬಂಧಿಕರು,ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಶವ ತಗೆದುಕೊಂಡು ಹೋದರು. ಆತ್ಮಹತ್ಯೆಗೆ ಪಿಂಚಣಿ ಯೋಜನೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಕುಟುಂಬಕ್ಕೆ ಪರಿಹಾರ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕು. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಓರ್ವ ಶಿಕ್ಷಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ ಸರ್ವಾಜನಿಕರಿಗೆ ರಕ್ಷಣೆ ನೀಡುವ ಪೊಲೀಸರೇ ಮೃತ ಶಿಕ್ಷಕನ ಕುಟುಂಬಸ್ಥರಿಗೆ ತಿಳಿಯದಂತೆ ಎಲ್ಲ ಕಾರ್ಯ ಮಾಡಿ ಮುಗಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ಮೃತ ಶಿಕ್ಷಕನ ಸಾವಿನ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net