

ಬಿಡದಿ : ಹೋಬಳಿಯ ಹನುಮಂತನಗರದ ಇತಿಹಾಸ ಪ್ರಸಿದ್ಧ ಕೋತಿ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಜಾಗದ ವಿವಾದ ಈಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕದ ತಟ್ಟಿದೆ.
ಹೌದು.. ವೀರಾಂಜನೇಯ ದೇವಾಲಯಕ್ಕೆ ಸೇರಿದ್ದು ಎನ್ನಲಾದ ಜಾಗವನ್ನು ಅತಿಕ್ರಮ ಮಾಡಿ ಕಟ್ಟಿದ್ದ ಕಾಂಪೌಂಡ್ ಕೆಡವಿ ಪರವಾನಗಿ ಪಡೆಯದೆ ರಸ್ತೆ ನಿರ್ಮಾಣ ಮಾಡಿಕೊಂಡು ನಷ್ಟ ಉಂಟುಮಾಡಿದ್ದಾರೆ ಎಂದು ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಎಂ.ತಿಮ್ಮೇಗೌಡ ಅವರು ಡಿಸಿ ಹಾಗೂ ಎಸ್.ಪಿ ಅವರಿಗೆ ದೂರು ನೀಡಿದ್ದಾರೆ. ಮಂಚನಾಯಕನಹಳ್ಳಿಯ ಮುಖಂಡರಾದ ಬ್ಯಾಟಪ್ಪ, ಮಹೇಶ್ ಕುಮಾರ್, ಯೋಗಾನಂದ ಸೇರಿ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟ್ರಸ್ಟ್‌ಗೆ ಸೇರಿದ ರಸ್ತೆ ಜಾಗ
ಮಂಚನಾಯಕನಹಳ್ಳಿಯ ಸರ್ವೇ ನಂಬರ್ 36/1ಎ ರಲ್ಲಿರುವ ಕೋತಿ ಆಂಜನೇಯಸ್ವಾಮಿ ದೇವಾಲಯಕ್ಕೆ 2.30 ಎಕರೆ ಜಾಗವಿದ್ದು, ಹನುಮಂತನಗರದ ವಸತಿ ಬಡಾವಣೆಗೆ ರಸ್ತೆ ಸಂಪರ್ಕದ ಸಮಸ್ಯೆಯಿದ್ದ ಕಾರಣ ಸ್ಥಳೀಯರ ಒತ್ತಾಯದ ಮೇರೆಗೆ ಕೆಲವು ವರ್ಷಗಳ ಹಿಂದೆ 18 ಅಡಿ ಜಾಗವನ್ನು ಉಚಿತವಾಗಿ ಬಿಟ್ಟುಕೊಡಲಾಗಿತ್ತು. ನಂತರ ಉಳಿಕೆ ಜಾಗ ಸರ್ವೇ ಮಾಡಿಸಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ, ದೇವಾಲಯದ ಟ್ರಸ್ಟಿಗಳ ಗಮನಕ್ಕೆ ತಾರದೆ ರಸ್ತೆ ವಿಸ್ತರಣೆ ನೆಪದಲ್ಲಿ ನ.30ರಂದು ಜೆಸಿಬಿ ಮೂಲಕ ಏಕಾಏಕಿ ಕಾಂಪೌಂಡ್ ತೆರವುಗೊಳಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ದೇಣಿಗೆ ಕೊಡದೆ ವಂಚನೆ : ನ.30 ರಂದು ಮಂಚನಾಯಕನಹಳ್ಳಿ ಗ್ರಾಪಂನಿಂದ ಜೆಸಿಜಿ ಬಳಸಿ ಕಾಂಪೌಂಡ್ ಕೆಡವಿದ್ದರು. ಇದನ್ನು ಪ್ರಶ್ನೆ ಮಾಡಿದ್ದ ವೇಳೆ 18 ಅಡಿ ರಸ್ತೆಗೆ ಸಂಬಂಧಿಸಿದ ಹಣವನ್ನು ವೀರಾಂಜನೇಯ ಟ್ರಸ್ಟ್‌ಗೆ ದೇಣಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಇಲ್ಲಿಯವರೆಗೂ ದೇಣಿಗೆ ಕೊಡದೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಾಣ ಬೆದರಿಕೆ : ಜೆಸಿಬಿ ಬಳಸಿ ಕಾಂಪೌಂಡ್ ಕೆಡವಿ ದೇವಾಲಯದ ಪಾವಿತ್ರ್ಯ ಹಾಳು ಮಾಡುತ್ತಿದ್ದ ವೇಳೆ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮ್ಯಾನೇಜರ್ ಕೇಳಲಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ದೇಗುಲದ ಕಾಂಪೌಂಡ್ ಕೆಡವಿ 5 ಲಕ್ಷ ರೂ. ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗ ರಸ್ತೆ ಕೆಲಸ ಮಾಡುತ್ತಿರುವುದನ್ನು ತಡೆಯಲಾಗಿದೆ. ಯಾವುದೇ ಇತ್ಯರ್ಥವಾಗದೆ ಕೆಲಸ ಮಾಡದಂತೆ ಸಂಭವಿಸಿದವರಿಗೆ ಸೂಚಿಸಲಾಗಿದೆ.
ಮೇಲ್ಸೇತುವೆ ಬೇಡ : ದೇವಾಲಯದ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಾಣ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ ಕೆಲಸ ಪ್ರಾರಂಭಿಸಲು ಬಿಡಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತದೆ. ದೇವಾಲಯದ ಪಕ್ಕದಲ್ಲೆ ಅರಣ್ಯ ಇಲಾಖೆಯ ಜಾಗ ಇದೆ ಅಲ್ಲಿ ನಿರ್ಮಾಣ ಮಾಡಿಕೊಳ್ಳಲಿ ಎಂದು ಎಂ.ತಿಮ್ಮೇಗೌಡ ತಿಳಿಸಿದ್ದಾರೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಅವರಿಗೂ ಈ ರಸ್ತೆ ವಿಚಾರಕ್ಕೂ ಸಂಬಂಧ ಇಲ್ಲ. ಈಗ ಆರೋಪ ಮಾಡುತ್ತಿರುವವರ ಜತೆಗೆ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ ಅವರು ಒಪ್ಪಿದ ಮೇಲೆ ರಸ್ತೆಯ ಜಾಗ ಕೆಲಸ ಮಾಡಲಾಗುತ್ತಿದೆ. ಅವರ ಆರೋಪಗಳೆಲ್ಲ ಸುಳ್ಳು. ಬ್ಯಾಟಪ್ಪ, ಮಂಚನಾಯಕನಹಳ್ಳಿ ಗ್ರಾಮದ ಮುಖಂಡ ದೇವಾಲಯದ ಟ್ರಸ್ಟ್ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತಿತ್ತು. ಟ್ರಸ್ಟಿಗಳು ಕೆಲಸ ತಡೆದಿದ್ದಾರೆ. 18 ಅಡಿ ರಸ್ತೆ ಬೇಕಾದರೆ ಇಂದಿನ ಮಾರುಕಟ್ಟೆ ಮೌಲ್ಯ ಎಷ್ಟಿದೆ ಅಷ್ಟು ಹಣವನ್ನು ದೇವಾಲಯದ ಟ್ರಸ್ಟ್‌ಗೆ ಸಂದಾಯ ಮಾಡಿ ರಸ್ತೆ ನಿರ್ಮಾಣ ಮಾಡಿಕೊಳ್ಳಲಿ. ಈ ಹಿಂದೆ ಇದ್ದ ಕಾಂಪೌಂಡ್ ಹೊಡೆದಿದ್ದಾರೆ. ಅದನ್ನು ನಿರ್ಮಾಣ ಮಾಡಿಕೊಡಲಿ. ಇದೇ ವಿಚಾರವಾಗಿ ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ ಅವರಿಗೆ ಲಿಖಿತವಾಗಿ ಟ್ರಸ್ಟ್‌ನಿಂದ ದೂರು ಸಲ್ಲಿಸಲಾಗಿದೆ. ಎಂ.ತಿಮ್ಮೇಗೌಡ ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷರು