

ಬಾಗಲಕೋಟೆ: ತಂದೆಯನ್ನು ಕಳೆದುಕೊಂಡು ಸ್ವಂತ ಸೂರು ಇಲ್ಲದೇ ಕೂಲಿ ಮಾಡಿ ತಾಯಿಯ ಜೊತೆ ಬದುಕು ಸಾಗಿಸುತ್ತಿರುವ ಬಾಲಕಿ ಪೂಜಾ ಹೂಗಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಎದುರು ಕಣ್ಣೀರಿಟ್ಟರು ಘಟನೆ ಶನಿವಾರ ನಡೆಯಿತು.
ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಬಾಲಕಿ ಪೂಜಾ ಹೂಗಾರ, ನಮ್ಮ ತಂದೆ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ನಾವು ತಾಯಿ ಜೊತೆ ಕೂಲಿ ಮಾಡಿಕೊಂಡು ಬದುಕುತ್ತಿದ್ದೇವೆ. ಇರಲು ಮನೆ ಇಲ್ಲ ಎಂದು ತಮ್ಮ ಸಂಕಷ್ಟ ಬಿಚ್ಚಿಟ್ಟರು. ತಕ್ಷಣಕ್ಕೆ ಡಿಸಿ ಪಿ.ಸುನೀಲಕುಮಾರ ಗ್ರಾಮ ಪಂಚಾಯಿತಿಯಿಂದ ಸ್ವರ ಸೂರು ಹೊಂದಲು ಜಾಗ ನೀಡಬೇಕು ಎಂದು ತಾ.ಪಂ ಇಒ ಶಿವಾನಂದ ಕಲ್ಲಾಪುರ ಅವರಿಗೆ ಸೂಚನೆ ನೀಡಿದರು. ಅಲ್ಲದೆ ಕುಟುಂಬಕ್ಕೆ ಪರಿಹಾರ ನೀಡಲು ಸಿಎಂ ಪರಿಹಾರ ನಿಧಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಭಗವತಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪೂರ್ವದಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಲು ತಿಳಿಸಲಾಗಿತ್ತು. ಗ್ರಾಮದಿಂದ ಒಟ್ಟು 37 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಯಿತು. ಪಿಂಚಣಿ, ಪಹಣಿ ತಿದ್ದುಪಡಿ, ಜಾನುವಾರು ಆರೋಗ್ಯ ತಪಾಸಣೆ, ಆಯುಷ್ಮಾನ ಕಾರ್ಡ್ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿತರಿಸಲಾಯಿತು.
ಅಲ್ಲದೆ ಗ್ರಾಮದಲ್ಲಿ ರಸ್ತೆ ಸುಧಾರಣೆ, ಜೇನು ಕೃಷಿಗೆ ಸಹಾಯಧನ, ಹೊಲಕ್ಕೆ ಹೋಗಲು ದಾರಿ, ಮುಗಳೊಳ್ಳಿ ಏತ ನೀರಾವರಿ ಯೋಜನೆಯಿಂದ ಜಮೀನು ಭೂಸ್ವಾಧೀನಕ್ಕೆ ಪರಿಹಾರಧನ, ಶಾಲೆಗಳ ಶೌಚಗೃಹ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಪರಿಹರಿಸುವ ಕಾರ್ಯವನ್ನು ಜಿಲ್ಲಾಧಿಕಾರಿ ಮಾಡಿದರು.
ಗ್ರಾಮದ ಸಮಸ್ಯೆ ಆಲಿಸಿದ ನಂತರ ಗ್ರಾಮ ಸಂಚಾರ ನಡೆಸಿದರು. ಗ್ರಾಮದಲ್ಲಿರುವ ಸಮಸ್ಯೆಗಳ ವಸ್ತುಸ್ಥಿತಿಯನ್ನು ಆಲಿಸಿದರು. ಅಲ್ಲದೆ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸರಿಯಾಗಿ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಶಾಲಾ ಮಕ್ಕಳ ಜೊತೆಗೆ ಸಂವಾದ ನಡೆಸುವ ಮೂಲಕ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಲು ಶ್ರಮ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕಿವಿಮಾತು ಹೇಳಿದರು.
ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಗವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಮಾದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಭೂದಾಖಲೆಗಳ ಉಪನಿರ್ದೇಶಕಿ ಮಹಾಂತೇಶ ಮುಳಗುಂದ, ಅಬಕಾರಿ ಇಲಾಖೆಯ ನಿಂಗನಗೌಡ ಹೊಸಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್., ತಹಸೀಲ್ದಾರ ವಿನಯಕುಮಾರ ಪಾಟೀಲ, ತಾ.ಪಂ ಕಾರ್ಯನಿರ್ವಾಕ ಅಧಿಕಾರಿ ಶಿವಾನಂದ ಕಲ್ಲಾಪುರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.