ಡಿಎಚ್​ಒಗೆ ತಾಲೂಕು ಆಸ್ಪತ್ರೆಗಳ ಜವಾಬ್ದಾರಿ

6KWR5
Published on

ಕಾರವಾರ: ಕೋವಿಡ್​ಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಒಳಗಿನ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಡೀನ್ ಅವರಿಗೆ, ತಾಲೂಕು ಆಸ್ಪತ್ರೆಗಳ ಸಂಪೂರ್ಣ ಜವಾಬ್ದಾರಿಯನ್ನು ಡಿಎಚ್​ಒ ಅವರಿಗೆ ವಹಿಸಲಾಗಿದೆ. ಅಲ್ಲಿನ ಎಲ್ಲ ಆಗುಹೋಗುಗಳಿಗೆ ಅವರೇ ಹೊಣೆಗಾರರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತರ ಜಿಲ್ಲೆಗಳಲ್ಲಿ ಆದ ಘಟನೆಗಳಿಂದ ಸರ್ಕಾರ ಪಾಠ ಕಲಿತಿದೆ. ಪರಸ್ಪರ ಆರೋಪ ಮಾಡುವ ಕಾಲ ಇದಲ್ಲ. ಆಸ್ಪತ್ರೆಗಳಿಗೆ ಬೇಕಾದ ಮೂಲ ಸೌಕರ್ಯಗಳಿಗಾಗಿ ಆರೋಗ್ಯಾಧಿಕಾರಿಗಳು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅವುಗಳನ್ನು ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದರು.

ನಾನು ಈಗಾಗಲೇ ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳನ್ನು , ಕ್ರಿಮ್್ಸ ಆಸ್ಪತ್ರೆಯನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೇನೆ. ಜಿಲ್ಲೆಯ ಆಸ್ಪತ್ರೆಗಳಿಗೆ ಕೋವಿಡ್ ಎದುರಿಸುವ ಶಕ್ತಿ ಇದೆ. ಜನ ಸಹಕಾರ ನೀಡಬೇಕು. ಇಂಥವರಿಗೆ ಆಕ್ಸಿಜನ್ ಬೆಡ್ ನೀಡಬೇಕು. ಇಂಥವರಿಗೆ ವೆಂಟಿಲೇಟರ್ ನೀಡಬೇಕು ಎಂದು ಒತ್ತಡ ಹೇರಬಾರದು. ಆ ನಿರ್ಣಯವನ್ನು ವೈದ್ಯರಿಗೆ ಬಿಡಬೇಕು ಎಂದರು.

ಕೋವಿಡ್ ನಿರ್ವಹಣೆಗೆ ಯಾರೇ ದೇಣಿಗೆ ನೀಡುವುದಿದ್ದರೂ ಸ್ವೀಕರಿಸಲು ಸಿದ್ಧರಿದ್ದೇವೆ. ದೇಣಿಗೆಯನ್ನು ಸದ್ಬಳಕೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಿದ್ದೇನೆ ಎಂದರು.

ಜಿಲ್ಲೆಯಲ್ಲೇ ನಾಲ್ಕು ಆಕ್ಸಿಜನ್ ಉತ್ಪಾದನಾ ಘಟಕ:

ಯಲ್ಲಾಪುರದಲ್ಲಿ 15 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಸಿದ್ಧವಾಗಿದ್ದು, ಏ. 7 ರ ಸಾಯಂಕಾಲದ ಹೊತ್ತಿಗೆ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯ ಇನ್ನೂ ಮೂರು ಕಡೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಮಂಜೂರಾಗಿದ್ದು, ಇನ್ನು ಒಂದುವರೆ ತಿಂಗಳಲ್ಲಿ ನಿರ್ವಣಕ್ಕೆ ತಯಾರಿ ನಡೆಸಲಾಗಿದೆ ಕಾರವಾರದ ಕ್ರಿಮ್್ಸ ಆಸ್ಪತ್ರೆ, ಶಿರಸಿ ಹಾಗೂ ಭಟ್ಕಳ ಆಸ್ಪತ್ರೆಗಳಲ್ಲಿ ಯಲ್ಲಾಪುರಕ್ಕಿಂತ ಹೆಚ್ಚಿನ ಸಾಮರ್ಥ್ಯದ ಆಕ್ಸಿಜನ್ ತಯಾರಿ ಘಟಕ ನಿರ್ವಣವಾಗಲಿದೆ ಎಂದರು. ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಆಕ್ಸಿಜನ್ ಕೊರತೆ ಇಲ್ಲ. ದಿನಕ್ಕೆ 4.5 ಟನ್ ಬೇಡಿಕೆ ಇದ್ದು, 11 ಟನ್ ಸಂಗ್ರಹಣಾ ಸಾಮರ್ಥ್ಯವಿದೆ. ಆಕ್ಸಿಜನ್​ಗಳ ಲಭ್ಯತೆ ಹಾಗೂ ಇತರ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ವಾರ್ ರೂಂ ವ್ಯವಸ್ಥೆ ಮಾಡಲಾಗಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ. ಎಸ್​ಪಿ ಶಿವಪ್ರಕಾಶ ದೇವರಾಜು, ಎಡಿಸಿ ಕೃಷ್ಣಮೂರ್ತಿ ಎಚ್.ಕೆ. ಡಿಎಚ್​ಒ ಡಾ.ಶರದ್ ನಾಯಕ ಇದ್ದರು.

ಬೆಡ್ ಲಭ್ಯತೆ

561-ಜಿಲ್ಲೆಯಲ್ಲಿರುವ ಒಟ್ಟು ಆಕ್ಸಿಜನ್ ಬೆಡ್

272 -ಆಕ್ಸಿಜನ್ ಬೆಡ್​ಗಳಲ್ಲಿ ಭರ್ತಿ

289-ಆಕ್ಸಿಜನ್ ಬೆಡ್​ಗಳು ಖಾಲಿ

61-ವೆಂಟಿಲೇಟರ್ ಬೆಡ್​ಗಳು

31-ಕ್ರಿಮ್ಸ್​ನಲ್ಲಿರುವ ವೆಂಟಿಲೇಟರ್ ಬೆಡ್​ಗಳು

14-ವೆಂಟಿಲೇಟರ್ ಬೆಡ್​ಗಳು ಭರ್ತಿ

47 -ವೆಂಟಿಲೇಟರ್ ಬೆಡ್​ಗಳು ಖಾಲಿ

ಪ್ರಮುಖ ನಿರ್ಣಯಗಳು

*ಗರ್ಭಿಣಿಯರಿಗೆ ಹೆರಿಗೆಗೂ ಎರಡು ವಾರ ಮುಂಚೆ ಕೋವಿಡ್ ಪರೀಕ್ಷೆ ಕಡ್ಡಾಯ.

*ಕಿರಾಣಿ ಹಾಗೂ ಇತರ ಅಗತ್ಯ ವಸ್ತುಗಳ ಅಂಗಡಿಯನ್ನು 12 ರ ಬದಲು 10 ರವರೆಗೆ ಮಾತ್ರ ತೆಗೆದಿಡಲು ನಿರ್ಧಾರ. ತರಕಾರಿ ಹಣ್ಣುಗಳನ್ನು ಮನೆ ಮನೆಗೆ ಇಡೀ ದಿನ ಮಾರಲು ಅವಕಾಶ.

*ದಾಂಡೇಲಿಯ ಇಎಸ್​ಐ ಆಸ್ಪತ್ರೆಯನ್ನು ಅಗತ್ಯ ಬಿದ್ದರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಎರಡು ದಿನದಲ್ಲಿ ಆದೇಶ.

*ಹುಬ್ಬಳ್ಳಿ ಇಎಸ್​ಐ ಆಸ್ಪತ್ರೆಯ 8 ವೈದ್ಯರನ್ನು ಮುಂಡಗೋಡ, ಹಳಿಯಾಳ, ಯಲ್ಲಾಪುರ ಮತ್ತು ದಾಂಡೇಲಿಗೆ ನಿಯೋಜನೆ.

*ಆಶಾ ಕಾರ್ಯಕರ್ತರ ಸೇವೆಗಳನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಡಿಎಚ್​ಒಗೆ ಸೂಚನೆ.

*ಕ್ರಿಮ್್ಸ ಆಸ್ಪತ್ರೆಗೆ ನರ್ಸ್​ಗಳು ಹಾಗೂ ಡಿ ದರ್ಜೆ ನೌಕರರ ನೇಮಕಾತಿಗೆ ತಕ್ಷಣ ಅವಕಾಶ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ.

*ತಾಲೂಕು ಆಸ್ಪತ್ರೆಗಳಿಗೆ ಬೇಕಾದ ನರ್ಸ್, ಎಎನ್​ಎಂ ನೇಮಕಕ್ಕೆ ಜಿಲ್ಲಾಧಿಕಾರಿಗೆ ಅಧಿಕಾರ

ಲಾಕ್​ಡೌನ್​ನಿಂದ ಸರ್ಕಾರ ಹಾಗೂ ಜನರಿಗೆ ಆರ್ಥಿಕ ಸಂಕಷ್ಟ ಉಂಟಾಗಲಿದೆ. ಇದರಿಂದ ನಾವು ಎಷ್ಟೇ ಕಷ್ಟವಾದರೂ ಲಾಕ್​ಡೌನ್ ಮಾಡದೇ ಇರಲು ಯತ್ನಿಸುತ್ತಿದ್ದೇವೆ. ಜನ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರಬಾರದು. ಬರುವುದಿದ್ದರೆ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹೊರ ಊರಿನಿಂದ ಬಂದವರು ತಾವಾಗಿಯೇ ಐಸೋಲೇಶನ್ ಆಗಬೇಕು. ಇನ್ನೊಂದು ವಾರ ಜನರ ವರ್ತನೆಯನ್ನಾಧರಿಸಿ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ. ಜನ ಸಹಕಾರ ಮಾಡದೇ ಇದ್ದರೆ ಸಂಪೂರ್ಣ ಲಾಕ್​ಡೌನ್ ಮಾಡಬೇಕಾಗಿ ಬರಬಹುದು.ಶಿವರಾಮ ಹೆಬ್ಬಾರಜಿಲ್ಲಾ ಉಸ್ತುವಾರಿ ಸಚಿವ

ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಭಟ್ಕಳ: ಕರೊನಾ ಸೋಂಕಿತ ಗರ್ಭಿಣಿಗೆ ತಾಲೂಕಾಸ್ಪತ್ರೆ ವೈದ್ಯರು ಬುಧವಾರ ರಾತ್ರಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ತಾಯಿ ಮತ್ತು ಮಗು ಇಬ್ಬರು ಸುರಕ್ಷಿತವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಪಟ್ಟಣದ ಚೌಥನಿ ನಿವಾಸಿ ಗರ್ಭಿಣಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು. ಗರ್ಭಿಣಿಯ ಪರಿಸ್ಥಿತಿ ಗಂಭೀರವಾಗಿದ್ದು, ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು. ಇದನ್ನು ಅರಿತ ಡಾ. ಶಮ್ಸನೂರ್ ಅವರು ಗರ್ಭಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಡಾ. ಸವಿತಾ ಕಾಮತ ಅರವಳಿಕೆ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಇಬ್ಬರು ಸುರಕ್ಷಿತವಾಗಿದ್ದಾರೆ. ೕ ಈ ವೇಳೆ ಶುಷೂಷಕಿಯರಾದ ರೇಖಾ ಮತ್ತು ಶಶಿಕಲಾ ಸಹಕರಿಸಿದ್ದರು.

ಕರೊನಾಕ್ಕೆ ಯಲ್ಲಾಪುರ ಸಿಆರ್​ಪಿ ಬಲಿ

ಅಂಕೋಲಾ: ಯಲ್ಲಾಪುರದಲ್ಲಿ ಸಿಆರ್​ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜು ವಸಂತ ನಾಯಕ (47) ಮಹಾಮಾರಿ ಕರೊನಾಕ್ಕೆ ಗುರುವಾರ ಬೆಳಗ್ಗೆ ಕಾರವಾರ ಸಿವಿಲ್ ಆಸ್ಪತ್ರೆಯಲ್ಲಿ ಬಲಿಯಾಗಿದ್ದಾರೆ.

ಮೂಲತಃ ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದವರಾಗಿದ್ದು, ಕಳೆದ ಒಂದು ವಾರದ ಹಿಂದೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಯಲ್ಲಾಪುರ ತಾಲೂಕಿನ ಲಿಂಗನಕೊಪ್ಪದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮೂರು ವರ್ಷದಿಂದ ಸಿಆರ್​ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಪತ್ನಿ ಮಂಜುಳಾ ನಾಯಕ ಕಾರವಾರ ಕೆರೆವಡಿ ಸಮೀಪದ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿಯಮ ಉಲ್ಲಂಘಿಸಿ ಆರತಕ್ಷತೆ

ಶಿರಸಿ: ಮದುವೆ ಆರತಕ್ಷತೆ ನಡೆಸುತ್ತಿದ್ದ ಸ್ಥಳವೊಂದಕ್ಕೆ ತಹಸೀಲ್ದಾರ್ ಹಾಗೂ ಪೊಲೀಸರು ತೆರಳಿ ಸಂಬಂಧಪಟ್ಟವರಿಗೆ ದಂಡ ವಿಧಿಸಿದ ಘಟನೆ ತಾಲೂಕಿನ ಹನಮಂತಿಯಲ್ಲಿ ನಡೆದಿದೆ.

ಹನುಮಂತಿ ಗ್ರಾಮದ ರಮೇಶ ಹಾಗೂ ಸವಿತಾ ಇವರ ಮದುವೆ ಮೇ 5ರಂದು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತ್ತು. ಮಾರನೆ ದಿನದ ಗುರುವಾರ ಮನೆಯಲ್ಲಿ 48 ಜನ ಸೇರಿ ಪರಸ್ಪರ ಅಂತರ ಕಾಯ್ದುಕೊಳ್ಳದೆ ಕೋವಿಡ್ ನಿಯಮವನ್ನು ಉಲ್ಲಂಘಿಸಿರುವುದು ಪರಿಶೀಲನೆ ನಡೆಸಿದಾಗ ಕಂಡು ಬಂದಿದ್ದು, ದಂಡ ವಿಧಿಸಲಾಗಿದೆ. ಸರ್ಕಾರದ ನಿಮಯದ ಪ್ರಕಾರ ಮದುವೆ ಹೊರತುಪಡಿಸಿ ಬೇರೆ ಕಾರ್ಯಕ್ರಮ ನಡೆಸಬಾರದು. ಕರೊನಾ ನಿಯಮ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.

ಹೊರ ಊರಿನಿಂದ ಬಂದವರಿಗೆ ಉದ್ಯೋಗ ಖಾತ್ರಿ

ಕಾರವಾರ: ಕರೊನಾ ಸಂಕಷ್ಟದಿಂದ ಊರಿಗೆ ಮರಳಿದವರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾಯುತ್ತಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ. ಹೇಳಿದ್ದಾರೆ.

ಗ್ರಾಮೀಣ ಪ್ರದೇಶದ ಜನರಿಗೆ ನರೇಗಾದಡಿ ತಮ್ಮ ಗ್ರಾಮಗಳಲ್ಲಿಯೇ ಕೆಲಸ ನೀಡಲಾಗುವುದು. ಕೃಷಿ ಕಾರ್ವಿುಕರು, ಕೂಲಿಕಾರರು, ಗ್ರಾಮೀಣ ಪ್ರದೇಶದ ಜನರು ಜನತಾ ಕರ್ಫ್ಯೂ ಸಮಯದಲ್ಲೂ ಯಾವುದೇ ನಿರ್ಬಂಧವಿಲ್ಲದೇ ಕೋವಿಡ್ ಕೆಲಸ ನಿರ್ವಹಿಸಬಹುದು ಎಂದಿದ್ದಾರೆ.

ಯಾರೂ ಉದ್ಯೋಗವಿಲ್ಲ ಎಂದು ಹತಾಶರಾಗುವುದು ಬೇಡ. ದಿನಕ್ಕೆ 289 ರೂ. ವೇತನ ಹಾಗೂ 10 ರೂ. ಸಲಕರಣೆ ವೆಚ್ಚ ಸೇರಿ 299 ರೂ.ಕೂಲಿ ನೀಡಲಾಗುವುದು. ಕುಟುಂಬವೊಂದಕ್ಕೆ 100 ದಿನ ಉದ್ಯೋಗ ನೀಡಲಾಗುವುದು. ಜಿಲ್ಲೆಯಲ್ಲಿ ದುಡಿಯೋಣ ಬಾ ಅಭಿಯಾನ,ಜಲಶಕ್ತಿ ಅಭಿಯಾನ ಮತ್ತು ಬದು ನಿರ್ಮಾಣ ಅಭಿಯಾನಗಳು ನಡೆಯುತ್ತಿವೆ. ಅಲ್ಲದೆ, ವೈಯಕ್ತಿಕವಾಗಿ ಕೃಷಿ ಹೊಂಡ, ತೆರೆದ ಬಾವಿ ನಿರ್ವಣ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು. ದನದ ಕೊಟ್ಟಿಗೆ, ಕುರಿ ಶೆಡ್, ಕೋಳಿ ಶೆಡ್, ನೆಲ ಸಮತಟ್ಟು, ಹೊಸ ತೋಟ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಕಲ್ಯಾಣಿ, ಕೆರೆಗಳ ಹೂಳೆತ್ತುವುದು, ಹೊಸ ಕೆರೆಗಳ ನಿರ್ವಣ, ಈಗಿರುವ ಕೆರೆಗಳ ದುರಸ್ತಿ, ಪುನಶ್ಚೇತನ ಸೇರಿ ಅನೇಕ ಕಾಮಗಾರಿಗಳನ್ನು ನರೇಗಾದಡಿ ಮಾಡಬಹುದಾಗಿದೆ ಎಂದು ಸಿಇಒ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net