

ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧ ಎದುರು ಡಿ.೨೨ ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದಾಜು ೨೫ ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಬಿಟಿಡಿಎ ಸದಸ್ಯ, ಸಮಾಜದ ಮುಖಂಡ ಮೋಹನ ನಾಡಗೌಡ ಹೇಳಿದರು.
ಪಂಚಮ ಸಾಲಿ ಸಮಾಜವು ಕಳೆದ ೨೮ ವರ್ಷಗಳಿಂದ ೨ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಕಳೆದ ಎರಡು ವರ್ಷದಿಂದ ನಿರಂತರವಾಗಿ ಹೋರಾಟ ನಡೆದಿದೆ. ರಾಜ್ಯ ಸರ್ಕಾರ ಮೀಸಲಾತಿ ನೀಡುವ ಭರವಸೆ ನೀಡಿತ್ತು. ಈ ವರೆಗೆ ಮೀಸಲಾತಿ ಘೋಷಣೆ ಮಾಡಿಲ್ಲ. ಹೀಗಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಡಿ.೨೨ ರಂದು ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ಪಾದಯಾತ್ರೆಯ ಕೈಗೊಂಡಿದ್ದು ಡಿ.೨೨ ರಂದು ಬೆಳಗಾವಿಗೆ ತಲುಪಲಿದೆ. ಬಾಗಲಕೋಟೆ ಜಿಲ್ಲೆಯಿಂದಲೂ ಅಂದಾಜು ೧ ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳಿದ್ದಾರೆ. ಸಮಾವೇಶವು ಪಕ್ಷಾತೀತವಾಗಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದ ಅವರು, ಬೆಳಗಾವಿಯ ಬೃಹತ್ ಸಮಾವೇಶದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಅಂದು ಮೀಸಲಾತಿ ಘೋಷಣೆ ಮಾಡಿದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮುಖಂಡರಾದ ಎಸ್.ಎನ್.ರಾಂಪೂರ, ನಿಂಗಪ್ಪ ಕೋಟಿ, ಸಂಗಮೇಶ ದೊಡ್ಡಮನಿ, ಮಂಜುನಾಥ ಪುರತಗೇರಿ ಇದ್ದರು.