

ಬಾಗಲಕೋಟೆ: ಬಹುದಿನಗಳಿಂದ ಕೈಗೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನಾ ಸಂತ್ರಸ್ತರ ಹೋರಾಟಕ್ಕೆ ಮಹತ್ವ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಡಿ.೧೬ ರಂದು ಮಧ್ಯಾಹ್ನ ೪ ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಶಾಸಕರು, ಸಂಸದರು, ಹೋರಾಟ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕೃಷ್ಣಾ ಮೇಲ್ದಂಡೆ ಯೋಜನಾ ಬಾಽತ ಸಂತ್ರಸ್ತರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಕೃಷ್ಣಾ ಸಂತ್ರಸ್ತರ ಹೋರಾಟ ಉದ್ದೇಶಿಸಿ ಭಾನುವಾರ ಅವರು ಮಾತನಾಡಿದರು.
ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸರ್ಕಾರದಿಂದ ಸೂಕ್ತ ನಿರ್ಧಾರದ ಸಾಧ್ಯತೆ ಇದ್ದು, ಸಭೆ ನಿರ್ಧಾರದ ಮೇಲೆ ನಮ್ಮ ಹೋರಾಟದ ತೀರ್ಮಾನ ತೆಗೆದುಕೊಳ್ಳಲಾಗುವುದು. ದೇಶದಲ್ಲೇ ಅತಿ ವಿಳಂಬದ ಯೋಜನೆ ಇದಾಗಿದ್ದು, ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳಿಂದಲೇ ಈ ಕಾಮಗಾರಿ ಇಷ್ಟು ವಿಳಂಬವಾಗಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಮಾತನಾಡಿ, ಯುಕೆಪಿಗೆ ಸರ್ಕಾರ ಎಷ್ಟು ಅನುದಾನ ಯಾವಾಗ ನೀಡುತ್ತದೆ ಎಂದು ಘೋಷಣೆ ಮಾಡಬೇಕು. ಈ ಯೋಜನೆಗೆ ಶಾಶ್ವತ ಪರಿಹಾರ ನೀಡಬೇಕು. ಸಿಎಂ ಇಂದು ಕರೆದಿರುವ ಸಭೆಯಲ್ಲಿ ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಯುಕೆಪಿಗಾಗಿ ದಿ.ವಾಸಣ್ಣ ದೇಸಾಯಿ ಅವರು ೪೦ ವರ್ಷ ಹೋರಾಟ ಮಾಡಿದ್ದರು. ಅವರು ಹೇಳಿದಂತೆ ಈ ಹೋರಾಟ ಯಶಸ್ವಿಯಾಗಲು ಪಕ್ಷಾತೀತ ಹೋರಾಟ ಮಾಡಬೇಕು. ಅಂದಾಗಲೇ ಯುಕೆಪಿ ಪೂರ್ಣಗೊಳ್ಳಲು ಸಾಧ್ಯ. ಕಾವೇರಿಗಾಗಿರುವ ಕಿಚ್ಚು, ಕೃಷ್ಣೆಯ ಮಕ್ಕಳಲ್ಲಿಲ್ಲ. ಉತ್ತರ ಕರ್ನಾಟಕದವರು ಶಾಂತಿ ಪ್ರೀಯರು. ಕಾವೇರಿಗೆ ನೀಡುವ ಮಹತ್ವವನ್ನು ಸರ್ಕಾರ ಕೃಷ್ಣೆಗೂ ನೀಡಬೇಕು. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕು ಇದು ಕೊನೆಯ ಹೋರಾಟವಾಗಬೇಕು ಎಂದು ತಿಳಿಸಿದರು.
ವಿಪ ಸದಸ್ಯ ಪಿ.ಎಚ್.ಪೂಜಾರ, ಹೋರಾಟ ಸಮಿತಿಯ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಡಾ.ಗಿರೀಶ ಮಾಸೂರಕರ, ರವಿ ಕುಮಟಗಿ, ಕುತುಬುದ್ದೀನ್ ಖಾಜಿ ಸೇರಿದಂತೆ ಇತರರಿದ್ದರು.