ಡಿ.ಕೆ. ಶಿವಕುಮಾರರಿಂದ ಕಾಂಗ್ರೆಸ್ ಬಲವರ್ಧನೆ

13 hkr 02
Published on

ಹಿರೇಕೆರೂರ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆಗೊಳ್ಳುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ರಟ್ಟೀಹಳ್ಳಿ, ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಈಶ್ವರ ಖಂಡ್ರೆ, ಸಲೀಮ್ ಅಹಮ್ಮದ್, ಸತೀಶ ಜಾರಕಿಹೋಳಿ ಅವರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ ಎಂದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ, ಮನೆ ಕಳೆದುಕೊಂಡ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಅಡಕೆ, ತೆಂಗು, ಗೋವಿನಜೋಳ ಬೆಳೆಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಬೆಂಬಲ ಬೆಲೆ ಘೊಷಿಸಬೇಕು ಹಾಗೂ ನೀರಾ ಇಳಿಸುವ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ತುಂಗಾ- ಭದ್ರಾ ನದಿ ಮೂಲದಿಂದ ಶಿಕಾರಿಪುರ ತಾಲೂಕಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ಸರಬರಾಜು ಮಾಡಲು ಈ ತಾಲೂಕಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರ ತಾಲೂಕಿಗೆ ನೀರು ಒಯ್ಯುವುದರಿಂದ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿಗೆ ಮಂಜೂರಾಗಿರುವ ಏತ ನೀರಾವರಿ ಯೋಜನೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ಎಸ್.ಕೆ. ಕರಿಯಣ್ಣನವರ, ಹಿರಿಯ ನ್ಯಾಯವಾದಿ ಎಸ್.ಬಿ.ತಿಪ್ಪಣ್ಣನವರ, ಬಸವರಾಜ ಯಲ್ಲಕ್ಕನವರ, ಜಿ.ವಿ. ಕುಲಕರ್ಣಿ, ಆನಂದ ನಾಯ್ಕರ, ಲಿಂಗರಾಜ ಕೊರಚರ, ರವಿ ಉಣಕಲ್ಲ, ವಿನಯ ಪಾಟೀಲ, ಜ್ಞಾನೇಶ್ವರ ಅಬಲೂರು, ಜ್ಯೋತಿ ಜಾಧವ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net