

ಬಾಗಲಕೋಟೆ: ವಿಮಾನ ನಿಲ್ದಾಣಕ್ಕಾಗಿ ಹಲಕುರ್ಕಿ ಗ್ರಾಮದ ಭೂ ಸ್ವಾಧೀನಕ್ಕೆ ರೈತರ ವಿರೋಧವಿದೆ. ಹೋರಾಟ ೧೦೦ ದಿನದತ್ತ ಸಾಗುತ್ತಿದ್ದರು ಭೂ ಸ್ವಾಧೀನ ಕೈ ಬಿಡುವ ಬಗ್ಗೆ ಲಿಖಿತ ಬಂದಿಲ್ಲ. ಆದ್ದರಿಂದ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುವ ನಿರ್ಧಾರ ಮಾಡಿದ್ದು, ಡಿ.೨೭ ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರಾದ ಪ್ರಕಾಶ ನಾಯಕ, ಮುತ್ತಪ್ಪ ಕೋಮಾರ ಹೇಳಿದರು.
ಈಗಾಗಲೇ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಧರಣಿ ೯೫ ದಿನ ಪೂರೈಸಿದೆ. ಸರ್ಕಾರದಿಂದ ಸ್ಪಷ್ಟ ಉತ್ತರ ಬಂದಿಲ್ಲ. ಇತ್ತ ಕಡೆ ಕ್ಷೇತ್ರದ ಶಾಸಕ, ಸಚಿವ ಮುರುಗೇಶ ನಿರಾಣಿ ಶೇ.೭೦ ರೈತರು ಒಪ್ಪಿಗೆ ಇದೆ ಅಂತ ಸುಳ್ಳು ಹೇಳುತ್ತಿದ್ದಾರೆ. ಇದು ಖಂಡನೀಯ. ವಿರೋಧ ಪಕ್ಷ ಕಾಂಗ್ರೆಸ್ ಸ್ವಾಭಿಮಾನ ಕಳೆದುಕೊಂಡಿದ್ದು, ಹೋರಾಟದ ಸ್ಥಳಕ್ಕೆ ಕಾಂಗ್ರೆಸ್ ಭೇಟಿ ನೀಡಿಲ್ಲ. ಯಾರು ನಮ್ಮಗೆ ಬೆಂಬಲ ನೀಡುತ್ತಾರೆ ಬಿಡುತ್ತಾರೆ. ಹೋರಾಟ ನ್ಯಾಯ ಸಿಗುವವರೆಗೂ ಬಿಡುವದಿಲ್ಲ ಎಂದು ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆರಕಲ್ಲ ಏತ ನೀರಾವರಿ, ಕೆರೂರ ಏತ ನೀರಾವರಿ ರೂವಾರಿಗಳಾದ ವಿ.ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಶಾಸಕ ಜೆ.ಟಿ.ಪಾಟೀಲ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು. ಸ್ಪಂದಿಸಿದ್ದರೇ ಆಡಳಿತ, ವಿರೋಧ ಪಕ್ಷ ವಿರುದ್ಧ ಹೋರಾಟ ನಿಶ್ಚಿತ. ಈ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದರೇ ನೀವೆ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.
ಇನ್ನು ಜಿಲ್ಲೆಯಲ್ಲಿ ಈಗಾಗಲೇ ಆಲಮಟ್ಟಿ ಹಿನ್ನೀರು, ನ್ಯಾಷನಲ್ ಹೈವೆಗಾಗಿ ಸಾಕಷ್ಟು ಭೂಮಿ ಕಳೆದುಕೊಂಡಿದ್ದೇವೆ. ೧೦ ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ, ಕೋಟಿಕಲ್ಲನಲ್ಲಿ ೫೦೦ ಎಕರೆ, ಬಾಗಲಕೋಟೆಯಲ್ಲಿ ೨೦೦ ಎಕರೆ , ಇಳಕಲ್ಲ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ೨೦೦ ಎಕರೆ ಹಾಗೂ ಜಿಲ್ಲೆಯಲ್ಲಿ ೪೦೦ ಎಕರೆ ಭೂಮಿ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿ ಕಾಯ್ದಿರಿಸಲಾಗಿದೆ. ಈ ವರೆಗೆ ಅಭಿವೃದ್ಧಿ ಪಡಿಸಿಲ್ಲ. ಇಂತಹ ಹಲವಾರು ಜ್ವಲಂತ ಸಮಸ್ಯೆಗಳು ಕಣ್ಣು ಮುಂದೆ ಇದ್ದರು ಭೂ ಸ್ವಾಧೀನ ಎನ್ನುವ ಗುಮ್ಮ ಕೈ ಬಿಡುತ್ತಿಲ್ಲ ಎಂದು ದೂರಿದರು.
ಮುಖಂಡರಾದ ಯಲ್ಲಪ್ಪ ಹೆಗಡೆ, ಪರಶುರಾಮ ಮಂಟೂರ, ಬಸವರಾಜ ಬಂಡಿವಡ್ಡರ, ಶಿವನಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕೋಟ್..
ಸಚಿವ ಮುರುಗೇಶ ನಿರಾಣಿ ರೈತರಿಗೆ, ಸಾರ್ವಜನಿಕರಿಗೆ ವಂಚನೆ ಮಾಡುತ್ತಲೆ ಬಂದಿದ್ದಾರೆ. ಕೋಟ್ಯಂತರ ರೂ. ಕಬ್ಬಿನ ಬಾಕಿ ಇಟ್ಟುಕೊಂಡಿದ್ದಾರೆ. ಅವರು ಕೇವಲ ಸಕ್ಕರೆ ಕಾರ್ಖಾನೆ ಮಾತ್ರ ಕಟ್ಟಿಲ್ಲ. ಸುಳ್ಳಿನ ಕಾರ್ಖಾನೆ ಕೂಡಾ ಸ್ಥಾಪಿಸಿದ್ದಾರೆ. ಹಲಕುರ್ಕಿ ಗ್ರಾಮಕ್ಕೆ ಸೌಜನ್ಯಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿಲ್ಲ.